ಸಕ್ಕರೆ ಉದ್ಯಮದಲ್ಲಿ ಹೆಸರು ಮಾಡಿರುವ ಕತ್ತಿ ಕುಟುಂಬ ಈಗ ಜಿಲ್ಲೆಯಲ್ಲಿ 1,500 ಕೋಟಿ ರೂ. ವೆಚ್ಚದಲ್ಲಿ ಕಬ್ಬಿಣ ಉತ್ಪಾದನೆ ಕಾರ್ಖಾನೆ ಸ್ಥಾಪನೆ ಮಾಡಲಿದೆ ಎಂದು ರಾಜ್ಯ ತೋಟಗಾರಿಕೆ ಹಾಗೂ ಬಂದೀಖಾನೆ ಸಚಿವ ಉಮೇಶ ಕತ್ತಿ ತಿಳಿಸಿದ್ದಾರೆ.
ಸಂಪನ್ಮೂಲ ಸಂಗ್ರಹಕ್ಕೆ ಷೇರು ಬಿಡುಗಡೆ ಮಾಡಲಾಗಿದ್ದು ಆಸಕ್ತರು ಖರೀದಿಸಬಹುದು. ವಿಶ್ವನಾಥ ಶುಗರ್ಸ್ ಅಂಗ ಸಂಸ್ಥೆಯಾಗಿರುವ ಈ ಕಬ್ಬಿಣ ಉತ್ಪಾದನೆ ಕಾರ್ಖಾನೆ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಸ್ಥಾಪನೆಯಾಗಲಿದೆ. 315 ಎಕರೆ ಜಮೀನು ನೀಡುವಂತೆ ಸರಕಾರಕ್ಕೆ ಮನವಿ ಮಾಡಲಾಗಿದ್ದು ಭೂ ಸ್ವಾನ ಪ್ರಕ್ರಿಯೆ ಚಾಲನೆ ಪಡೆದಿವೆ ಎಂದರು.
ಕಾರ್ಖಾನೆ 2013ರ ಮಾರ್ಚ್ ಅಂತ್ಯದಲ್ಲಿ ಉತ್ಪಾದನೆ ಆರಂಭಿಸಲಿದೆ. ನಿರ್ಮಾಣ ಎರಡು ಹಂತದಲ್ಲಿ ಆಗುತ್ತದೆ. ಮೊದಲ ಹಂತದಲ್ಲಿ 700 ಕೋಟಿ ರೂ., ಎರಡನೇ ಹಂತದಲ್ಲಿ 800 ಕೋಟಿ ರೂ. ಹೂಡಲಾಗುತ್ತದೆ. ವಾರ್ಷಿಕ 10 ಲಕ್ಷ ಟನ್ ಕಬ್ಬಿಣ ಉತ್ಪಾದನೆ ಗುರಿ ಹೊಂದಲಾಗಿದೆ. ಮೊದಲ ಹಂತದಲ್ಲಿ 5 ಲಕ್ಷ ಟನ್ ಕಬ್ಬಿಣ ಉತ್ಪಾದನೆ ಮಾಡಲಿದೆ.
ಷೇರು ನೀಡುವಿಕೆಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಲಾಗಿದೆ. ಮೊದಲ ಹಂತದ ಕೆಲಸಕ್ಕೆ ಶೇರು ಮೂಲಕ 200 ಕೋಟಿ ರೂ., ಸಾಲ ರೂಪದಲ್ಲಿ 300 ಕೋಟಿ ರೂ. ಮತ್ತು ಸಂಸ್ಥೆಯಿಂದ 200 ಕೋಟಿ ರೂ. ಬಂಡವಾಳ ಹೂಡಲಾಗುವುದು ಎಂದು ವಿವರಿಸಿದರು.
ಮುಖ್ಯಮಂತ್ರಿ ಅಧ್ಯಕ್ಷತೆಯ ಹೈಪವರ್ ಕಮಿಟಿ ಕಾರ್ಖಾನೆ ಆರಂಭಕ್ಕೆ ಒಪ್ಪಿಗೆ ನೀಡಿದೆ. ಉದ್ಯಮಗಳ ಸ್ಥಾಪನೆಗೆ ಸರಕಾರದಿಂದ ಉತ್ತೇಜನ ಇರುವುದರಿಂದ ಯಾವುದೇ ತಾಂತ್ರಿಕ ಅಡಚಣೆಗಳು ಇಲ್ಲ. ಜೂನ್ ಮೊದಲ ವಾರದಲ್ಲಿ ಸಂಸ್ಥೆಯ ಚೇರಮನ್ ನಿಖಿಲ್ ಕತ್ತಿ ಸರಕಾರದೊಂದಿಗೆ ಒಡಂಬಡಿಕೆಗೆ ಸಹಿ ಹಾಕಲಿದ್ದಾರೆ. ಜತೆಗೆ ಜೂನ್ 3 ಮತ್ತು 4 ರಂದು ಬೆಂಗಳೂರಿನಲ್ಲಿ ನಡೆಯಲಿರುವ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲೂ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.