ಬಜ್ಪೆ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದ 158 ಮಂದಿಯಲ್ಲಿ ಕೊನೆಗೂ 12 ಶವಗಳ ಗುರುತು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಮೃತದೇಹಗಳ ಡಿಎನ್ಎ ಮಾದರಿ ಹಾಗೂ ಕುಟುಂಬಿಕರಿಂದ ಸಂಗ್ರಹಿಸಿದ್ದ ಡಿಎನ್ಎ ಮಾದರಿ ತಾಳೆಯಾಗದ ಪರಿಣಾಮ ಈ ಎಲ್ಲ ಶವಗಳಿಗೂ ವಿವಿಧ ಧರ್ಮಗಳ ವಿಧಿವಿಧಾನಗಳ ಮೂಲಕ ಸಾಮೂಹಿಕ ಅಂತ್ಯ ಸಂಸ್ಕಾರ ನೆರವೇರಿಸಲು ಜಿಲ್ಲಾಡಳಿತ ಮುಂದಾಗಿದೆ.
ವಿಮಾನ ದುರಂತದಿಂದ ಮನೆಯವರು ಸಾಕಷ್ಟು ನೋವು, ಆಘಾತ ಅನುಭವಿಸಿದ್ದು ಒಂದೆಡೆಯಾದರೆ, ಇದೀಗ ಕೊನೆಗೂ 12ಶವಗಳ ಸ್ಥಿತಿ ಅನಾಥ ಎಂಬಂತಾಗಿದೆ. ಸುಟ್ಟು ಕರಕಲಾಗಿರುವ ಶವ ಯಾರದ್ದೆಂಬುದು ಡಿಎನ್ಎ ಪರೀಕ್ಷೆಯಲ್ಲೂ ತಾಳೆಯಾಗದಿರುವುದು ಮತ್ತೊಂದು ಆಘಾತಕಾರಿ ಅಂಶವಾಗಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಏರ್ ಇಂಡಿಯಾ ಎಕ್ಸ್‌ಪ್ರೆಸ್ ದುರಂತದಲ್ಲಿ ಸಾವನ್ನಪ್ಪಿದ 158 ಶವಗಳನ್ನು ಪತ್ತೆಹಚ್ಚುವಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಯಶಸ್ವಿಯಾಗಿತ್ತು. ಕೆಲವು ಶವಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದರಿಂದ ಅವುಗಳನ್ನು ವಾರಿಸುದಾರರಿಗೆ ನೀಡುವಲ್ಲಿ ಗೊಂದಲ ಏರ್ಪಟ್ಟಿತ್ತು. ಅಂತಿಮವಾಗಿ 22 ಶವಗಳ ಡಿಎನ್ಎ ಪರೀಕ್ಷೆ ನಡೆಸಿ ವಾರಿಸುದಾರರಿಗೆ ನೀಡಲು ತೀರ್ಮಾಸಲಾಗಿತ್ತು ಎಂದು ವಿವರಿಸಿದರು.
ಅದರಂತೆ ಹೈದರಾಬಾದ್‌ನಿಂದ ಬಂದ ಡಿಎನ್ಎ ವರದಿ ಅನುಸರಿಸಿ ಕಳೆದ ವಾರ 11ಮೃತದೇಹಗಳನ್ನು ಕುಟುಂಬಿಕರಿಗೆ ಹಸ್ತಾಂತರಿಸಲಾಗಿತ್ತು. ಉಳಿದ 11ಶವಗಳ ಡಿಎನ್ಎ ಮಾದರಿ ಮೃತರ ಸಂಬಂಧಿಗಳಿಂದ ಸಂಗ್ರಹಿಸಿದ್ದ ಮಾದರಿ ತಾಳೆಯಾಗಿಲ್ಲದ ಹಿನ್ನೆಲೆಯಲ್ಲಿ ಮತ್ತೊಂದು ಸಮಸ್ಯೆ ತಲೆದೋರಿದೆ ಎಂದರು.
ಏತನ್ಮಧ್ಯೆ ಕಳೆದವಾರ ಮೃತದೇಹ ಹಸ್ತಾಂತರ ವೇಳೆ ಡಿಎನ್ಎ ವರದಿ ಪ್ರಕಾರ ಗುರುತಿಸಿದ ಶವವನ್ನು ಸ್ವೀಕರಿಸಲು ಉಡುಪಿಯ ಮಲ್ಪೆಯ ನವೀದ್ ಮನೆಯವರು ಒಪ್ಪಿರಲಿಲ್ಲ. ಈಗ ಉಳಿದಿರುವ 12 ಶವಗಳ ಅಂತ್ಯಕ್ರಿಯೆಯನ್ನು ಸಾಮೂಹಿಕವಾಗಿ ನೆರವೇರಿಸಲು ಜಿಲ್ಲಾಡಳಿತ ತೀರ್ಮಾನಿಸಿದೆ ಎಂದು ತಿಳಿಸಿದರು.
ಕೆಲವರ ವಿರೋಧ: ಮೃತದೇಹಗಳ ಸಾಮೂಹಿಕ ಅಂತ್ಯಕ್ರಿಯೆಗೆ ಕೆಲವು ಕುಟುಂಬಗಳು ವಿರೋಧ ವ್ಯಕ್ತಪಡಿಸಿವೆ. ಉಡುಪಿಯ ಒಂದೇ ಕುಟುಂಬದ ನಾಲ್ವರು ದುರಂತದಲ್ಲಿ ಸಾವನ್ನಪ್ಪಿದ್ದರು. ಅದರಲ್ಲಿ ತಂದೆ,ತಾಯಿಯ ಶವ ಪತ್ತೆಯಾಗಿತ್ತು. ಇಬ್ಬರು ಮಕ್ಕಳ ಮೃತದೇಹ ಮಾತ್ರ ಪತ್ತೆಯಾಗಿಲ್ಲವಾಗಿತ್ತು. ಹಾಗಾಗಿ ಸಾಮೂಹಿಕ ಅಂತ್ಯಸಂಸ್ಕಾರಕ್ಕೆ ಆ ಕುಟುಂಬ ವಿರೋಧ ವ್ಯಕ್ತಪಡಿಸಿದೆ ಎಂದು ಮೂಲವೊಂದು ತಿಳಿಸಿದೆ.