ಮೇ 22ರಂದು ಮಂಗಳೂರು ವಿಮಾನ ನಿಲ್ದಾಣವಿರುವ ಬಜಪೆಯ ಕೆಂಜಾರು ಸಮೀಪ ಅಪಘಾತಕ್ಕೀಡಾದ ಏರ್ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಪ್ರಯಾಣಿಕರ ಚಿನ್ನಾಭರಣಗಳನ್ನು ಕದ್ದ ಆರೋಪದಲ್ಲಿ ದಕ್ಷಿಣ ಕನ್ನಡ ದಿಲ್ಲಾ ಅಪರಾಧ ಪತ್ತೆ ದಳವು ಒಬ್ಬನನ್ನು ಬಂಧಿಸಿ, ಸುಮಾರು ಕಾಲು ಕೆಜಿ ಚಿನ್ನ ವಶಪಡಿಸಿಕೊಂಡಿದೆ.
ಅವಘಡದಲ್ಲಿ ಸುಟ್ಟು ಕರಕಲಾದ ಪ್ರಯಾಣಿಕರ ಶವಗಳ ಮೇಲಿಂದ ಬಂಧಿತ ಆರೋಪಿಯು ಆಭರಣಗಳನ್ನು ಕದ್ದಿದ್ದು, ಆತನಿಂದ 256.9 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಇಷ್ಟು ಮಾತ್ರವಲ್ಲದೆ ಆತನಿಂದ ಸುಮಾರು 6.37 ವಕ್ಷ ರೂಪಾಯಿ ಮೌಲ್ಯದ ಒಂದು ಕಾರನ್ನೂ ವಶಪಡಿಸಿಕೊಳ್ಳಲಾಗಿದೆ.
ಕದ್ದ ಮಾಲು ಮಾರಾಟಕ್ಕೆ ಸೆಂಟ್ರಲ್ ಮಾರ್ಕೆಟ್ ಪ್ರದೇಶಕ್ಕೆ ಬರುತ್ತಾನೆಂಬ ಸುಳಿವು ಪಡೆದ ಪೊಲೀಸರು ಆತನಿಗಾಗಿ ಬಲೆ ಬೀಸಿದ್ದರು. ಆತ ಬಂದ ತಕ್ಷಣವೇ, ಕಾರು ತಡೆದು ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡಿದಾಗ, ಒಂದು ಚಿನ್ನದ ಬಳೆ ಮತ್ತು ಸುಟ್ಟು ಕರಕಲಾದ ಕೆಲವು ಆಭರಣಗಳು ದೊರೆತಿದ್ದವು.
ಬಂಧಿತನನ್ನು ಮರವೂರಿನ ಸತ್ತಾರ್ ಎಂದು ಗುರುತಿಸಲಾಗಿದ್ದು, ಆತನನ್ನು ತೀವ್ರವಾಗಿ ವಿಚಾರಣೆಗೊಳಪಡಿಸಿದಾಗ, ಬಡ್ಡುಮಂಡೆ ಅಲಿಯಾಸ್ ಇರ್ಷಾದ್ ಎಂಬ ಜೋಕಟ್ಟೆ ಪ್ರದೇಶದ ರಿಕ್ಷಾ ಚಾಲಕನೊಂದಿಗೆ ಸೇರಿ, ಪರಿಹಾರ ಕಾರ್ಯಾಚರಣೆ ನಡೆಸುವ ನೆಪದಲ್ಲಿ ಹೆಣಗಳ ಮೈಮೇಲಿಂದ ಚಿನ್ನ ಎಗರಿಸಿರುವುದಾಗಿ ಒಪ್ಪಿಕೊಂಡಿದ್ದಾನೆ. ಮತ್ತಷುಟ ತನಿಖೆ ನಡೆಯುತ್ತಿದೆ.