ನೆರೆಸಂತ್ರಸ್ತರ ಮನೆ ನಿರ್ಮಾಣ ಆಗಿಲ್ಲ, ಕ್ಷಮಿಸಿ: ಶ್ರೀರಾಮುಲು
ಗದಗ, ಬುಧವಾರ, 2 ಜೂನ್ 2010( 11:32 IST )
NRB
ಉತ್ತರ ಕರ್ನಾಟಕದ ನೆರೆ ಸಂತ್ರಸ್ತರನ್ನು ನಿರ್ಲಕ್ಷಿಸಿಲ್ಲ ಅವರಿಗೆ ಬೇಕಾದ ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಪ್ರತಿಪಕ್ಷಗಳು ವಿನಾಃಕಾರಣ ಆರೋಪಿಸುತ್ತಿವೆ ಎಂದು ಹೇಳುತ್ತ ಬಂದಿದ್ದ ಆಡಳಿತಾರೂಢ ಬಿಜೆಪಿ ಸರ್ಕಾರ ಕೊನೆಗೂ ತನ್ನ ತಪ್ಪನ್ನು ಒಪ್ಪಿಕೊಂಡಿದೆ. ನೆರೆ ಸಂತ್ರಸ್ತರಿಗೆ ಕಟ್ಟಿಕೊಡುವ ಆಸರೆ ಯೋಜನೆ ವಿಳಂಬವಾಗಿದ್ದು, ಅದಕ್ಕಾಗಿ ಜನರಲ್ಲಿ ಕ್ಷಮೆಯಾಚಿಸುವುದಾಗಿಯೂ ಹೇಳಿದೆ.
ನೆರೆ ಸಂತ್ರಸ್ತರ ಬಗ್ಗೆ ಸರ್ಕಾರ ನಿರ್ಲಕ್ಷ್ಯ ಧೋರಣೆ ತಾಳುತ್ತಿದ್ದು, ಇನ್ನು ಆ ಭಾಗದ ಜನರು ತಾಳ್ಮೆಯಿಂದ ಇರುವುದರಲ್ಲಿ ಅರ್ಥವಿಲ್ಲ, ಮುಖ್ಯಮಂತ್ರಿ, ಜನಪ್ರತಿನಿಧಿಗಳಿಗೆ ಒದೆಯಿರಿ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ, ಜನ ಒದ್ದರೆ ನಾವು ಒದೆಸಿಕೊಳ್ಳಲು ಸಿದ್ದ ಎಂದು ಸಚಿವ ಶ್ರೀರಾಮುಲು ಹೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು!
ನೆರೆಸಂತ್ರಸ್ತರ ಆಸರೆ ಯೋಜನೆಯಲ್ಲಿ ಮನೆಗಳ ನಿರ್ಮಾಣ ಕಾರ್ಯ ವಿಳಂಬವಾಗಲು ನಾವೇ ಕಾರಣ, ಇದಕ್ಕೆ ಬೇರೆಯವರನ್ನು ದೂರವುದಿಲ್ಲ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳುವ ಮೂಲಕ ಸರ್ಕಾರದ ಪ್ರಮಾದವನ್ನು ಒಪ್ಪಿಕೊಂಡಿದ್ದಾರೆ.
ಕಳೆದ ವರ್ಷ ಸುರಿದ ಧಾರಾಕಾರ ಗಾಳಿ-ಮಳೆಗೆ ಉತ್ತರ ಕರ್ನಾಟಕ ಪ್ರವಾಹದಿಂದ ತತ್ತರಿಸಿಹೋಗಿತ್ತು. ಸಾವಿರಾರು ಜನ ಮನೆ, ಮಠ ಕಳೆದುಕೊಂಡು ಅನಾಥವಾಗಿದ್ದರು. ಜಿಲ್ಲೆಯ 14ಗ್ರಾಮಗಳ ನಿರಾಶ್ರಿತರಿಗೆ ಸರ್ಕಾರ ಈ ಮಳೆಗಾಲದೊಳಗೆ ಹೊಸ ಮನೆಗಳನ್ನು ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿತ್ತು. ಆದರೆ ಅದನ್ನು ಈಡೇರಿಸಲು ವಿಫಲವಾಗಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.
ಅದೇ ರೀತಿ ಮನೆ ನಿರ್ಮಾಣ ಕಾರ್ಯ ಕುಂಠಿತವಾಗಲು ಯಾವ ಅಧಿಕಾರಿ ಅಥವಾ ಬೇರೆ ಯಾರನ್ನೂ ದೂಷಿಸುವುದಿಲ್ಲ, ಇದಕ್ಕೆಲ್ಲಾ ಜಿಲ್ಲಾ ಉಸ್ತುವಾರಿ ಸಚಿವಾಗಿ ನಾನೇ ನೇರ ಹೊಣೆ ಹೊರುವೆ ಎಂದು ಶ್ರೀರಾಮುಲು ಹೇಳಿದರು.