ನಕ್ಸಲ್ ವಿಚಾರದಲ್ಲಿ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಅವರ ನಿಲುವಿನ ಕುರಿತಂತೆ ತನ್ನ ಸಂಪೂರ್ಣ ಬೆಂಬಲ ಇದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಪೂಜಾರಿ ಅವರ ಖಂಡನೆಯನ್ನು ಸಮರ್ಥಿಸಿರುವ ಅವರು, ಪೂಜಾರಿ ಮಾತಿನಲ್ಲಿ ಸತ್ಯವಿದೆ. ಇದರಲ್ಲಿ ಪಕ್ಷದ ನಿಷ್ಠೆ ಮುಖ್ಯವಾಗುವುದಿಲ್ಲ. ಸತ್ಯಕ್ಕೆ ಬೆಲೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು.
ದೇಶದಲ್ಲಿ ನಕ್ಸಲ್ ಸಮಸ್ಯೆ ಹೆಚ್ಚುತ್ತಿರುವಾಗ ಸುಮ್ಮನೆ ಕುಳಿತಿರುವ ಚಿದಂಬರಂ ನಿಲುವನ್ನು ಖಂಡಿಸುವ ಮೂಲಕ ಪೂಜಾರಿ ಗಮನ ಸೆಳೆದಿದ್ದಾರೆ. ಹಾಗಾಗಿ ಪೂಜಾರಿ ಅವರ ಕಾಳಜಿ ಮೆಚ್ಚಲೇಬೇಕು ಎಂದರು.
ಜನಾರ್ದನ ಪೂಜಾರಿ ಅವರು ತನ್ನದೇ ಪಕ್ಷದ ನೇತೃತ್ವದ ಸರಕಾರದ ವೈಫಲ್ಯಗಳನ್ನು ಬೊಟ್ಟು ಮಾಡಿದ್ದಾರೆ. ನಕ್ಸಲ್ ವಿಚಾರದಲ್ಲಿ ಕೇಂದ್ರ ಸರಕಾರದ ಮೃದು ನಿಲುವನ್ನು ಖಂಡಿಸಿದ್ದಾರೆ. ಚಿದಂಬರಂ ಅವರೊಬ್ಬ ಅಯೋಗ್ಯ ಸಚಿವ ಎಂಬುದನ್ನು ತನ್ನೂರಿನವರ ಗಮನಕ್ಕಾದರೂ ತಂದಿದ್ದಾರೆ. ಆ ಮಟ್ಟಿಗೆ ಅವರನ್ನು ಮೆಚ್ಚಬೇಕು ಎಂದು ನಳಿನ್ ಹೇಳಿದರು.