ಕೃಷಿ ಉತ್ಸವಗಳು ರೈತರು ಇರುವ ಸ್ಥಳದಲ್ಲೇ ನಡೆಯಬೇಕೇ ಹೊರತು ಸಭಾಂಗಣದಲ್ಲಿ ಅಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್ ಪ್ರತಿಪಾದಿಸಿದರು.
ಕೃಷಿ ಇಲಾಖೆ ಮತ್ತು ಜಿಲ್ಲಾ ಪಂಚಾಯಿತಿ, ತುಮಕೂರು ಆಶ್ರಯದಲ್ಲಿ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಆಯೋಜಿಸಿರುವ ಜಿಲ್ಲಾ ಕೃಷಿ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೈತರಿಂದ, ರೈತರಿಗಾಗಿ, ರೈತರಿಗೋಸ್ಕರ ಎಂಬುದು ಕೃಷಿ ಉತ್ಸವದ ಘೋಷಣೆಯಾಗಿದ್ದು, ಈ ಘೋಷಣೆ ನಿಜಕ್ಕೂ ಸಾಕಾರವಾಗಬೇಕಾದರೆ ಕೃಷಿ ಉತ್ಸವಗಳು ರೈತರು ನೆಲೆಸಿರುವ ಕಡೆ ಜರುಗಬೇಕು. ನಗರಾಭಿವೃದ್ದಿ ಇಲಾಖೆ ಕಾರ್ಯಕ್ರಮಗಳು ನಡೆಯುವಂತಹ ಕಲಾಕ್ಷೇತ್ರದಲ್ಲಿ ಕೃಷಿ ಕಾರ್ಯಕ್ರಮಗಳು ನಡೆದರೆ ಪ್ರಯೋಜನವಿಲ್ಲ. ಇಂತಹ ಕೃಷಿ ಉತ್ಸವಗಳಲ್ಲಿ ತಾಲೂಕುವಾರು ಪ್ರಗತಿಪರ ರೈತರನ್ನು ಗುರುತಿಸಿ ಸನ್ಮಾನಿಸಿದರೆ ಉತ್ಸವಕ್ಕೆ ಹೆಚ್ಚು ಅರ್ಥ ಬರುತ್ತದೆ ಎಂದು ಸಲಹೆ ನೀಡಿದರು.
ಕೃಷಿ ಕ್ಷೇತ್ರದಲ್ಲಿ ಹೊಸ ಅನ್ವೇಷಣೆಗಳು ಜರುಗುತ್ತಿದ್ದು, ರೈತರ ಬದುಕಿನಲ್ಲಿ ಆಶಾಕಿರಣ ಮೂಡಿಸುವ ಅನೇಕ ಕಾರ್ಯಕ್ರಮಗಳು ಕೃಷಿ ಇಲಾಖೆಯಿಂದ ನಡೆಯುತ್ತಿವೆ. ಆದರೂ ಗ್ರಾಮೀಣ ಜನರು ನಗರಕ್ಕೆ ವಲಸೆ ಬರುತ್ತಿರುವುದು ತಪ್ಪುತ್ತಿಲ್ಲ. ರಾಜ್ಯದಲ್ಲಿ ನಗರೀಕರಣದ ವೇಗ ಶೇ.38ರಷ್ಟಿದ್ದು, ಇನ್ನೂ ಕೆಲವೇ ವರ್ಷಗಳಲ್ಲಿ ಶೇ.50ರಿಂದ 55 ಪ್ರಮಾಣ ದಾಟುವ ಅಪಾಯವಿದೆ ಎಂದರು.
ಕೃಷಿಗೆ ಇಂದು ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ. ಗುಜರಾತ್‌ನಲ್ಲಿ ಕೃಷಿ ಕ್ಷೇತ್ರದ ಆದಾಯ 6 ವರ್ಷಗಳಲ್ಲಿ 9,000 ಕೋಟಿಯಿಂದ 36,000 ಕೋಟಿ ರೂ.ಗೆ ಏರಿಕೆಯಾಗಿದೆ. ಈ ಏರಿಕೆಗೆ ಕೃಷಿ ಕ್ಷೇತ್ರದಲ್ಲಿ ಗುಜರಾತ್ ಸರಕಾರ ಜಾರಿಗೊಳಿಸಿರುವ ಹೊಸ ಅನ್ವೇಷಣೆಗಳು, ನೀರಾವರಿ ಸೌಲಭ್ಯ, ಸಹಾಯಧಾನ, ಜಾಗೃತಿ ಕಾರ್ಯಕ್ರಮಗಳು ಕಾರಣ ಎಂದು ತಿಳಿಸಿದರು.