ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿರುವ ಮಾಜಿ ಸಚಿವ ಹರತಾಳು ಹಾಲಪ್ಪ ಇದೀಗ ಆಸ್ಪತ್ರೆಯಲ್ಲಿ ಮಾನಸಿಕವಾಗಿ ಕಂಗಾಲಾಗಿದ್ದಾರಂತೆ...ಅಷ್ಟೇ ಅಲ್ಲ ವೈದ್ಯರು ಸೂಚಿಸಿದ ಆಹಾರ ಸೇವಿಸಲು ನಿರಾಕರಿಸಿರುತ್ತಿರುವ ಪರಿಣಾಮ ಆವರು ತೂಕದಲ್ಲಿ ಐದು ಕೆಜಿ ಕಡಿಮೆಯಾಗಿದ್ದಾರಂತೆ!
ಅತ್ಯಾಚಾರ ಆರೋಪ ಪ್ರಕರಣ ಬಯಲಾಗುತ್ತಿದ್ದಂತೆಯೇ ಸಾಕಷ್ಟು ಬೆಳವಣಿಗೆಗಳು ನಡೆದ ನಂತರ ಹಾಲಪ್ಪ ಅವರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ರಕ್ತದೊತ್ತಡ, ಸಕ್ಕರೆ ಖಾಯಿಲೆ ಹೆಚ್ಚಾಗಿದ್ದು, ಅವರು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದು ಮನೋವೈದ್ಯರಿಂದ ಚಿಕಿತ್ಸೆ ನೀಡಲು ನಿರ್ಧರಿಸಲಾಗಿದೆ ಎಂದು ಆಸ್ಪತ್ರೆ ವೈದ್ಯಾಧಿಕಾರಿ ಡಾ.ತಿಲಕ್ ವಿವರಿಸಿದ್ದಾರೆ.
ಹೆಚ್ಚಿನ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರಿಂದ ಹಾಲಪ್ಪ ಅವರು ಮಂಗಳವಾರ ಎರಡು ಬಾರಿ ವಾಂತಿ ಮಾಡಿಕೊಂಡಿದ್ದು, ಕಡಿಮೆ ಪ್ರಮಾಣದಲ್ಲಿ ಊಟ ಸೇವಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಬಲ್ಲಮೂಲಗಳ ಪ್ರಕಾರ ಹಾಲಪ್ಪ ಅವರಿಗೆ ಜಾಮೀನು ದೊರೆಯದೇ ಇರುವುದು ಮಾನಸಿಕ ಒತ್ತಡಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಹಾಗಾಗಿ ಅವರ ಆರೋಗ್ಯ ದಿನೇ, ದಿನೇ ಹದಗೆಡುತ್ತಿದೆ ಎಂದು ಹಾಲಪ್ಪ ಆಪ್ತವಲಯದ ಮೂಲಗಳು ಹೇಳಿವೆ.
ಆಸ್ಪತ್ರೆಯಲ್ಲಿ ಹಾಲಪ್ಪ ವಿಚಾರಣೆ: ಹಾಲಪ್ಪ ಅವರ ಆರೋಗ್ಯ ಸುಧಾರಿಸುತ್ತಿದ್ದು ಶೀಘ್ರವೇ ಅವರನ್ನು ಡಿಸ್‌ಚಾರ್ಜ್ ಮಾಡಲಾಗುವುದು ಎಂದು ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ತಿಳಿಸಿದ್ದರೂ ಕೂಡ ಈವರೆಗೂ ಡಿಸ್‌ಚಾರ್ಜ್ ಮಾಡಿಲ್ಲ. ಆ ಕಾರಣದಿಂದಾಗಿ ಬುಧವಾರ ಸಿಐಡಿ ಅಧಿಕಾರಿಗಳು ವಿಕ್ಟೋರಿಯಾ ಆಸ್ಪತ್ರೆ ವಾರ್ಡ್‌ನಲ್ಲೇ ಹಾಲಪ್ಪ ಅವರ ವಿಚಾರಣೆ ನಡೆಸಿದರು.