ರಾಜ್ಯಪಾಲರಿಂದ ಸರ್ಕಾರ ಅಲ್ಲಾಡಿಸಲು ಸಾಧ್ಯವಿಲ್ಲ: ಈಶ್ವರಪ್ಪ
ಬೆಂಗಳೂರು, ಗುರುವಾರ, 3 ಜೂನ್ 2010( 10:59 IST )
ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಕಿಡಿಕಾರುವುದನ್ನು ಮುಂದುವರಿಸಿರುವಂತೆಯೇ, ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಕೂಡ ಮತ್ತೆ ತಿರುಗೇಟು ನೀಡಿದ್ದು, ಸರ್ಕಾರಕ್ಕೆ ಇಡೀ ರಾಜ್ಯದ ಜನತೆಯ ಬೆಂಬಲವಿದೆ. ಹಾಗಾಗಿ ಇಂತಹ ಆರು ಸಾವಿರ ರಾಜ್ಯಪಾಲರು ಬಂದರೂ ಸರ್ಕಾರವನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ವಾಯುವ್ಯ, ಪಶ್ಚಿಮ ಶಿಕ್ಷಕರ ಕ್ಷೇತ್ರ ಹಾಗೂ ವಾಯುವ್ಯ ಪದವೀಧರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಗೆ ಬುಧವಾರ ಪಕ್ಷದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯಪಾಲರು ಸಂವಿಧಾನಬದ್ಧವಾಗಿಯೇ ಕಾರ್ಯನಿರ್ವಹಿಸಲಿ, ಅವರ ಬಗ್ಗೆ ನಮಗೆ ಗೌರವ ಇದೆ. ಆದರೆ ಕಾಂಗ್ರೆಸ್ ಪಕ್ಷದ ವಕ್ತಾರರಂತೆ ಬಹಿರಂಗಸಭೆಗಳಲ್ಲಿ ಸರ್ಕಾರದ ವಿರುದ್ಧ ಟೀಕಿಸುವುದು ನ್ಯಾಯವಲ್ಲ ಎಂದರು.
ವಿಪಕ್ಷಗಳು ಕೇವಲ ದೂರುವುದನ್ನೇ ರಾಜಕೀಯ ದಂಧೆ ಮಾಡಿಕೊಂಡಿವೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ರಾಜ್ಯದ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಆಡಳಿತಾರೂಢ ಬಿಜೆಪಿ ಸರ್ಕಾರದ ಅಭಿವೃದ್ಧಿ ಕೆಲಸಗಳನ್ನು ಸಹಿಸಿಕೊಳ್ಳಲು ಆಗದೆ, ರಾಜ್ಯಪಾಲರಿಗೆ ದೂರು ಕೊಡುವುದನ್ನೇ ಕಾಯಕ ಮಾಡಿಕೊಂಡಿವೆ ಎಂದು ದೂರಿದ ಈಶ್ವರಪ್ಪ, ವಿಪಕ್ಷಗಳ ಟೀಕೆಗಳಿಗೆ ತಲೆಕೆಡಿಸಿಕೊಳ್ಳದೆ ರಾಜ್ಯದ ಅಭಿವೃದ್ಧಿ ಮಾಡುವುದೇ ಪಕ್ಷದ ಗುರಿ ಎಂದರು.