ರಾಜ್ಯಸಭೆ, ವಿಧಾನಪರಿಷತ್ ಚುನಾವಣೆ ಸಂಬಂಧ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ತಮಗೇನೂ ಗೊತ್ತಿಲ್ಲ, ಎಲ್ಲವನ್ನೂ ಕುಮಾರಸ್ವಾಮಿಗೆ ಬಿಟ್ಟಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.
ಬುಧವಾರ ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದಲ್ಲಿ ವಿಶೇಷ ಹೋಮಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ವಿಚಾರದ ಬಗ್ಗೆ ನನಗೇನೂ ಹೆಚ್ಚಿನ ವಿವರ ಲಭ್ಯವಾಗಿಲ್ಲ.ಮಾತುಕತೆ ಎಲ್ಲಾ ಕುಮಾರಸ್ವಾಮಿಗೆ ಬಿಟ್ಟಿದ್ದು, ಅದರಲ್ಲಿ ತನ್ನ ಪಾತ್ರವೇನೂ ಇಲ್ಲ ಎಂದರು.
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಕೇವಲ ಜೆಡಿಎಸ್ ಪಕ್ಷಕ್ಕೆ ಸೇರಿದ್ದು ಎಂಬ ಭಾವನೆ ಸರಿಯಲ್ಲ, ಎಲ್ಲಾ ಪಕ್ಷಗಳಿಗೂ, ಎಲ್ಲರಿಗೂ ಮುಕ್ತವಾಗಿ ಭೇಟಿ ನೀಡುವ ಅವಕಾಶವಿದೆ ಎಂದರು.
ಮುರಿದು ಬಿದ್ದ ಮೈತ್ರಿ: ಕಾಂಗ್ರೆಸ್ ರಾಜ್ಯಸಭೆಗೆ ಬಿ.ಕೆ.ಹರಿಪ್ರಸಾದ್ ಅವರನ್ನು ಆಯ್ಕೆ ಮಾಡುತ್ತಿರುವ ಬಗ್ಗೆ ಜೆಡಿಎಸ್ ತಕರಾರು ಎತ್ತಿರುವುದರಿಂದ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಮಾತುಕತೆ ಮುರಿದು ಬಿದ್ದಿದೆ ಎನ್ನಲಾಗಿದೆ. ಏತನ್ಮಧ್ಯೆ ಮಂಗಳವಾರ ಪುನಃ ಕಾಂಗ್ರೆಸ್ ವರಿಷ್ಠರ ಜತೆ ಮಾತುಕತೆ ನಡೆಸಲು ದೆಹಲಿಗೆ ತೆರಳಿದ್ದ ಕುಮಾರಸ್ವಾಮಿ ಬುಧವಾರ ಬೆಂಗಳೂರಿಗೆ ವಾಪಸಾಗಿದ್ದಾರೆ.ಆದರೆ ಕಾಂಗ್ರೆಸ್ ಹೈಕಮಾಂಡ್ ಜೆಡಿಎಸ್‌ನ ಕರಾರು, ವಿರೋಧಗಳಿಗೆ ಸೊಪ್ಪು ಹಾಕದೆ ಮೈತ್ರಿ ವಿಷಯದಲ್ಲಿ ದೂರ ಉಳಿಯುವುದಾಗಿ ತಿಳಿಸಿದೆ ಎಂದು ಮೂಲವೊಂದು ಹೇಳಿದೆ.