ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರ ಅಭಿವೃದ್ದಿ ಯೋಜನೆಯೊಂದಿಗೆ ರಾಜ್ಯವನ್ನು ಪ್ರಗತಿ ಪಥದತ್ತ ಒಯ್ದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ನಗರದ ಕ್ಲಬ್ ರಸ್ತೆಯಲ್ಲಿ ವಾಯವ್ಯ ಪದವೀಧರ ಮತ್ತು ಶಿಕ್ಷಕರ ಮತ್ತು ಕ್ಷೇತ್ರದ ಅಭ್ಯರ್ಥಿಗಳ ಚುನಾವಣೆ ಪ್ರಚಾರ ಕಾರ್ಯಾಲಯ ಉದ್ಘಾಟಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಕಳೆದ 60 ವರ್ಷಗಳ ಅವಧಿಯಲ್ಲಿ ಮಾಡದ ಅಭಿವೃದ್ದಿಯನ್ನು ಬಿಜೆಪಿ ಸರಕಾರ ಎರಡೇ ವರ್ಷದಲ್ಲಿ ಮಾಡಿ ತೋರಿಸಿದೆ. ಬಿಜೆಪಿಯ ಸಂಘಟನಾತ್ಮಕ ನೆಲೆ ಪಕ್ಷಕ್ಕೆ ಜಯಭೇರಿ ತಂದುಕೊಡಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ, ವಿಧಾನಸಭೆ, ವಿಧಾನ ಪರಿಷತ್, ಲೋಕಸಭೆ, ಸಹಕಾರ ಸಂಸ್ಥೆಗಳು, ಹಾಲು ಉತ್ಪಾದಕರ ಮಹಾಮಂಡಳ ಸೇರಿದಂತೆ ಹಳ್ಳಿಯಿಂದ ನಗರಪ್ರದೇಶದವರೆಗಿನ ಎಲ್ಲ ಚುನಾವಣೆಗಳಲ್ಲೂ ಬಿಜೆಪಿ ಜಯಗಳಿಸಿದೆ. ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆಯ ನಾಲ್ಕು ಸ್ಥಾನಗಳನ್ನೂ ಗೆಲ್ಲುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಗೆ ಲಕ್ಷಾಂತರ ಕಾರ್ಯಕರ್ತರಿದ್ದಾರೆ. ಅವರೇ ಗೆಲುವಿನ ರೂವಾರಿಗಳು. ಆದರೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಳ್ಳಲು ದಿಲ್ಲಿಗೆ ಹೋದರೂ ಯಶಸ್ಸು ಕಂಡಿಲ್ಲ. ಎದುರಾಳಿಗಳ ಒಡಕಿನಿಂದ ಬಿಜೆಪಿ ಗೆಲುವು ಕಾಣಲಿದೆ ಎಂದರು. ಬಿಜೆಪಿ ರಾಜ್ಯದ ಜನತೆಯ ಮನಗೆದ್ದ ಪಕ್ಷವಾಗಿದೆ. ರಾಜ್ಯದ ಅಭಿವೃದ್ದಿ ಕಾರ್ಯ ಗಳನ್ನು ನೋಡಿ ಜನ ಮೆಚ್ಚಿದ್ದಾರೆ. ರಾಜ್ಯದೆಲ್ಲೆಡೆ ಬಿಜೆಪಿಯ ಭದ್ರವಾದ ನೆಲೆ ಇದೆ ಎಂದು ತಿಳಿಸಿದರು.