ಸಮೃದ್ಧ ಕರ್ನಾಟಕ ನಿರ್ಮಾಣದ ಕನಸು ನನಸು ಮಾಡಲು ಹೊರಟಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ, ರಾಜ್ಯದ ವಿವಿಧ ವಲಯಗಳಲ್ಲಿ ಬಂಡವಾಳ ಹೂಡುವಂತೆ ಆಯೋಜಿಸಿದ್ದ ವಿಶ್ವ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ದೇಶೀಯ ಹಾಗೂ ವಿದೇಶಿ ಕಂಪನಿಗಳು ಸೇರಿದಂತೆ ಮೊದಲ ದಿನವೇ ಸುಮಾರು ಎರಡುವರೆ ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡುವ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿವೆ.
ವಿಶ್ವದ ಅಗ್ರಗಣ್ಯ ಉದ್ದಿಮೆದಾರರಿಗೆ ರತ್ನಗಂಬಳಿ ಸ್ವಾಗತ ಕೋರಿರುವ ರಾಜ್ಯ ಸರ್ಕಾರ ಆ ನಿಟ್ಟಿನಲ್ಲಿ ಬಹುದೊಡ್ಡ ಯಶಸ್ಸು ಸಾಧಿಸಿದೆ. ವಿಶ್ವದ ಪ್ರತಿಷ್ಠಿತ ಉದ್ಯಮಿಯಾದ ಲಕ್ಷ್ಮಿ ಮಿತ್ತಲ್ 30ಸಾವಿರ ಕೋಟಿ ರೂಪಾಯಿ ಬಂಡವಾಳ ಹೂಡಿಕೆಗೆ ಹಾಗೂ ಬಿರ್ಲಾ ಕಂಪನಿ ಐದು ಸಾವಿರ ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಒಪ್ಪಂದಕ್ಕೆ ಸಹಿ ಹಾಕಿದರು.
ನಗರದ ಅರಮನೆ ಮೈದಾನದಲ್ಲಿ ಗುರುವಾರ ಏರ್ಪಡಿಸಿದ್ದ ಎರಡು ದಿನಗಳ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಬಿಜೆಪಿ ಮುಖಂಡ ಅರುಣ್ ಜೇಟ್ಲಿ ಉದ್ಘಾಟಿಸುವ ಮೂಲಕ ಚಾಲನೆ ನೀಡಿದರು. ಸಮಾವೇಶದಲ್ಲಿ ಖ್ಯಾತ ಉದ್ಯಮಿಗಳಾದ ಲಕ್ಷ್ಮಿ ಮಿತ್ತಲ್, ಕುಮಾರ ಮಂಗಲಂ ಬಿರ್ಲಾ, ಅಜೀಂ ಪ್ರೇಮ್‌ಜೀ, ಡಾ.ವಿಜಯ್ ಮಲ್ಯ, ಸಜ್ಜನ್ ಜಿಂದಾಲ್, ಕಿರಣ್ ಮಜೂಂದಾರ್, ಇನ್ಫೋಸಿಸ್‌ನ ಮೋಹನದಾಸ್ ಪೈ ಸೇರಿದಂತೆ ವಿದೇಶಿ ಉದ್ಯಮಿದಾರರು ಭಾಗವಹಿಸಿದ್ದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಕೇಂದ್ರ ಸಚಿವರಾದ ವೀರಪ್ಪ ಮೊಯ್ಲಿ, ಸುಭೋದ್ ಕಾಂತ್ ಸಹಾಯ್, ಕೇಂದ್ರ ಯೋಜನಾ ಆಯೋಗದ ಸದಸ್ಯ ಡಾ.ಕೆ.ಕಸ್ತೂರಿ ರಂಗನ್, ರಾಜ್ಯದ ಸಚಿವರು, ಶಾಸಕರು ಪಾಲ್ಗೊಂಡಿದ್ದರು.
ಹೂಡಿಕೆದಾರರಿಗೆ ರೆಡ್ ಕಾರ್ಪೆಟ್ ಸ್ವಾಗತ: ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಕರ್ನಾಟಕದಲ್ಲಿ ಬಂಡವಾಳ ಹೂಡಲು ವಿಪುಲ ಅವಕಾಶಗಳಿದ್ದು, ಹೂಡಿಕೆದಾರರಿಗೆ ರತ್ನಗಂಬಳಿ ಸ್ವಾಗತ ನೀಡುವುದಾಗಿ ಘೋಷಿಸಿದರು. ಇನ್ನು ಮುಂದೆ ಆಡಳಿತದಲ್ಲಿ ವಿಳಂಬ ನೀತಿಗೆ ಅವಕಾಶ ಇರುವುದಿಲ್ಲ. ರಾಜ್ಯವನ್ನು ಪ್ರಗತಿ ಪಥದತ್ತ ಕೊಂಡೊಯ್ಯಲು ಬಂಡವಾಳ ಹೂಡಿಕೆದಾರರಿಗೆ ರೆಡ್ ಕಾರ್ಪೆಟ್ ವೆಲ್‌ಕಮ್ ನೀಡುವುದಾಗಿ ಹೇಳಿದರು.
ಹೂಡಿಕೆದಾರರ ಯೋಜನೆಗಳಿಗೆ ಏಕಗವಾಕ್ಷಿ ಮೂಲಕ ಆದಷ್ಟು ಶೀಘ್ರ ಮಂಜೂರಾತಿ ನೀಡಲು ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಬಂಡವಾಳ ಹೂಡಿಕೆದಾರರ ಯೋಜನೆಗಳು ಸಕಾಲದಲ್ಲಿ ಅನುಷ್ಠಾನಕ್ಕೆ ಬರಲು ರಾಜ್ಯ ಸರ್ಕಾರ ಎಲ್ಲ ರೀತಿಯ ಬೆಂಬಲ ನೀಡುವುದಾಗಿ ಅವರು ಭರವಸೆ ನೀಡಿದರು.
ಪ್ರಮುಖ ಕಂಪನಿಗಳ ಬಂಡವಾಳ ಹೂಡಿಕೆ ವಿವರ: ಲಕ್ಷ್ಮಿ ಮಿತ್ತಲ್ ಅವರ ಅರ್ಸೆಲಾರ್ ಕಂಪನಿ-30ಸಾವಿರ ಕೋಟಿ, ಸೆಲ್ ಕಂಪನಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ-1376ಕೋಟಿ ರೂ., ನೆಸ್ಟಲ್ ಇನ್ಪಾಟ್ ನ್ಯೂಡೆಲ್ಸ್-349.23ಕೋಟಿ, ಮೇಯರ್ ಅರ್ಗಾನಿಕ್ ಫಾರ್ಮಾಸಿಟಿಕಲ್-45ಕೋಟಿ, ಅಮರಾ ಕಾರ್ಪೋರೇಷನ್ ಸಂಶೋಧನೆ ಮತ್ತು ಅಭಿವೃದ್ದಿ ಕೇಂದ್ರ 45ಕೋಟಿ, ಲಾಫರ್ಗ್ ಸಿಮೆಂಟ್ ಫ್ಲಾಟ್-1500 ಕೋಟಿ ರೂ.
ಭಾರತೀಯ ಕಂಪನಿಗಳಾದ ಎಂಆರ್‌ಪಿಎಲ್, ಒಎನ್‌ಜಿಸಿ ಪೆಟ್ರೋ ಕೆಮಿಕಲ್-8656 ಕೋಟಿ ರೂ., ರಿಲಯನ್ಸ್ ಗ್ಯಾಸ್ ಪೈಪ್ ಲೈನ್-6796 ಕೋಟಿ ರೂ., ಗೇಲ್ ಗ್ಯಾಸ್ ಪೈಪ್ ಲೈನ್ 4544ಕೋಟಿ ರೂ., ಜುವಾರಿ ಫರ್ಟಿಲೈಸರ್ಸ್ ಯೂರಿಯಾ ಫ್ಲಾಟ್-6565 ಕೋಟಿ ರೂ., ಬಿರ್ಲಾ ಸಿಮೆಂಟ್ ಘಟಕ 5 ಸಾವಿರ ಕೋಟಿ, ರಿಲಯನ್ಸ್ ಸಿಮೆಂಟ್ ಘಟಕ-2500ಕೋಟಿ, ಇನ್ಫೋಸಿಸ್ ಸಾಫ್ಟ್‌ವೇರ್ 2050ಕೋಟಿ ರೂ, ವಿಪ್ರೋ ಐಟಿ ಕ್ಯಾಂಪಸ್-477ಕೋಟಿ, ಬೆಮೆಲ್ ಏರ್‌ಕ್ರಾಫ್ಟ್ ಘಟಕ-316 ಕೋಟಿ ರೂ.
ರೈತಸಂಘ, ಕರವೇ ಪ್ರತಿಭಟನೆ: ರಾಜ್ಯದ ರೈತರ ಭೂಮಿಯನ್ನು ವಶಪಡಿಸಿಕೊಂಡು ಬಂಡವಾಳ ಹೂಡಿಕೆ ಮಾಡಬೇಕಾದ ಅಗತ್ಯವಿಲ್ಲ ಎಂದು ವಿರೋಧಿಸಿ ರೈತಪರ ಸಂಘಟನೆ, ಕರವೇ ಹಾಗೂ ಸಮತಾ ಸೈನಿಕ ದಳ ಪ್ರತಿಭಟನೆ ನಡೆಸಿ ವಿರೋಧ ವ್ಯಕ್ತಪಡಿಸಿದವು. ಏತನ್ಮಧ್ಯೆ, ಬಂಡವಾಳ ಹೂಡಿಕೆ ಸಮಾವೇಶ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಶಿವಮೊಗ್ಗದಿಂದ ಆಗಮಿಸಿದ್ದ ಮೂರು ಮಂದಿ ರೈತರು ಒಳನುಗ್ಗಿ ಪ್ರತಿಭಟನೆ ನಡೆಸಿದ್ದರು. ನಂತರ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಮೂಲವೊಂದು ತಿಳಿಸಿದೆ.