ಮಾಜಿ ಸಚಿವ ಹರತಾಳು ಹಾಲಪ್ಪ ಅವರ ಕಾಮಕಾಂಡ ಪ್ರಕರಣದ ಮಹತ್ವದ ಬೆಳವಣಿಗೆ ಎಂಬಂತೆ ಗುರುವಾರ ವೆಂಕಟೇಶ್ ಮೂರ್ತಿ ಮತ್ತು ಚಂದ್ರಾವತಿ ದಂಪತಿಗಳು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ, ಆಸ್ಪತ್ರೆಯ ವೈದ್ಯರ ಜೊತೆ ಮಾತುಕತೆ ನಡೆಸಿದರು.
ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ಬಹಿರಂಗಗೊಂಡ ನಂತರ ಹಾಲಪ್ಪ ಅನಾರೋಗ್ಯದ ನೆಪವೊಡ್ಡಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎದೆನೋವು, ಜ್ವರ, ರಕ್ತದೊತ್ತಡ ಸೇರಿದಂತೆ ಹಲವಾರು ಪ್ರಹಸನಗಳ ನಡುವೆ ಇದೀಗ ಮಾನಸಿಕ ಒತ್ತಡದಿಂದ ಹಾಲಪ್ಪ ಅವರು ಬಳಲುತ್ತಿದ್ದಾರೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿಗಳು ತಿಳಿಸಿದ್ದರು.
ಏತನ್ಮಧ್ಯೆ ಹಾಲಪ್ಪ ವಿರುದ್ಧ ದೂರು ಕೊಟ್ಟ ಚಂದ್ರಾವತಿ ಮತ್ತು ವೆಂಕಟೇಶ್ ಮೂರ್ತಿ ದಂಪತಿಗಳು ಇಂದು ದಿಢೀರನೆ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ಕೊಟ್ಟು, ಆಸ್ಪತ್ರೆಯ ಅಧೀಕ್ಷಕ ಡಾ.ತಿಲಕ್ ಅವರೊಂದಿಗೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಸಿಐಡಿ ಅಧಿಕಾರಿಗಳು ಕೂಡ ಉಪಸ್ಥಿತರಿದ್ದರು.
ಆದರೆ ಚಂದ್ರಾವತಿ ದಂಪತಿಗಳು ಯಾವ ಕಾರಣಕ್ಕೆ ಆಸ್ಪತ್ರೆಗೆ ಭೇಟಿ ನೀಡಿದ್ದರು ಎಂಬ ಅಂಶ ಬಹಿರಂಗವಾಗಿಲ್ಲ, ಈ ಸಂದರ್ಭದಲ್ಲಿ ದಂಪತಿಗಳು ಹಾಲಪ್ಪ ಅವರನ್ನು ಭೇಟಿಯಾದರೋ ಇಲ್ಲವೋ ಎಂಬುದು ಗೊತ್ತಾಗಿಲ್ಲ. ಅಲ್ಲದೇ ಹಾಲಪ್ಪ ಅವರು ಅನಾರೋಗ್ಯದ ನೆಪವೊಡ್ಡಿ ನಾಟಕವಾಡುತ್ತಿದ್ದಾರೆಯೇ ಅಥವಾ ಜಾಮೀನು ಸಿಗದ ಕಾರಣ ಸುಳ್ಳು ಕಾರಣ ಹೇಳುತ್ತಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಆಸ್ಪತ್ರೆಗೆ ಭೇಟಿ ನೀಡಿರುವ ಸಾಧ್ಯತೆ ಇದೆ ಎಂದು ಮೂಲವೊಂದು ತಿಳಿಸಿದೆ.
ರಕ್ತ ಪರೀಕ್ಷೆಗೆ ಹಾಲಪ್ಪ ಒಪ್ಪಿಗೆ: ಹಾಲಪ್ಪ ಅವರು ಡಿಎನ್ಎ ಪರೀಕ್ಷೆಗೆ ರಕ್ತದ ಮಾದರಿ ನೀಡಲು ಒಪ್ಪಿಗೆ ಸೂಚಿಸಿದ್ದಾರೆಂದು ಹಾಲಪ್ಪ ಪರ ವಕೀಲರು ತಿಳಿಸಿದ್ದಾರೆ.
ನ್ಯಾಯಾಲಯದ ಆದೇಶಕ್ಕೆ ಬದ್ದವಾಗಿದ್ದು, ಅದರಂತೆ ಹಾಲಪ್ಪ ನಡೆದುಕೊಳ್ಳಲಿದ್ದಾರೆ. ಡಿಎನ್ಎಗೆ ರಕ್ತದ ಮಾದರಿ ನೀಡಲಿದ್ದಾರೆ ಎಂದು ಸ್ಪಷ್ಟಪಡಿಸಿರುವ ವಕೀಲ ರವಿ ಬಿ.ನಾಯಕ್, ಪ್ರಕರಣದ ಬಗ್ಗೆ ಕೂಲಂಕಷ ತನಿಖೆ ನಡೆಯಬೇಕೆಂದು ಹಾಲಪ್ಪ ಅವರು ಸೂಚಿಸಿರುವುದಾಗಿಯೂ ಅವರು ಈ ಸಂದರ್ಭದಲ್ಲಿ ಹೇಳಿದರು.