ಅಕ್ರಮ ಗಣಿಗಾರಿಕೆ ಕುರಿತಂತೆ ಖುದ್ದು ಹಾಜರಾಗಿ ವಿವರಣೆ ನೀಡುವಂತೆ ರಾಜ್ಯಪಾಲರು ನೀಡಿದ್ದ ಅಂತಿಮ ಗಡುವನ್ನು ಸಚಿವ ಜನಾರ್ದನ್ ರೆಡ್ಡಿ ಧಿಕ್ಕರಿಸಿ ಅವರ ಪರ ವಕೀಲರು ಹಾಜರಾಗಿದ್ದಕ್ಕೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ತೀವ್ರ ತರಾಟೆಗೆ ತೆಗೆದುಕೊಂಡು, ರೆಡ್ಡಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರನ್ನು ರವಾನೆ ಮಾಡುವ ಮೂಲಕ ವಿವಾದದ ಕಿಚ್ಚು ಭುಗಿಲೆದ್ದಂತಾಗಿದೆ.
ಅಕ್ರಮ ಗಣಿಗಾರಿಕೆ ಕುರಿತು ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಮುಖಂಡ ಕೆ.ಸಿ.ಕೊಂಡಯ್ಯ ಅವರು ರಾಜ್ಯಪಾಲರನ್ನು ಭೇಟಿಯಾಗಿ ದೂರು ನೀಡಿದ್ದರು. ಆ ಹಿನ್ನೆಲೆಯಲ್ಲಿ ರಾಜ್ಯಪಾಲರು ಜನಾರ್ದನ ರೆಡ್ಡಿ ಅವರು ಜೂನ್ 3 ರೊಳಗೆ ಖುದ್ದು ಹಾಜರಾಗುವಂತೆ ಅಂತಿಮ ಗಡುವು ವಿಧಿಸಿ ನೋಟಿಸ್ ನೀಡಿದ್ದರು.
ಇದಕ್ಕೂ ಮುನ್ನ ನೋಟಿಸ್ ಧಿಕ್ಕರಿಸಿ ರೆಡ್ಡಿ ತನ್ನ ಪರ ವಕೀಲರನ್ನು ರಾಜಭವನಕ್ಕೆ ಕಳುಹಿಸಿದ್ದರು. ಅದರಿಂದ ಕೆರಳಿದ್ದ ರಾಜ್ಯಪಾಲರು ಜೂನ್ 3ರೊಳಗೆ ಖುದ್ದು ಹಾಜರಾಗುವಂತೆ ಅಂತಿಮ ಗಡುವು ನೀಡಿದ್ದರು. ಆದರೆ ರೆಡ್ಡಿ ರಾಜ್ಯಪಾಲರ ನೋಟಿಸ್‌ಗೆ ಕ್ಯಾರೆ ಎನ್ನದೇ ತನ್ನ ಪರವಾಗಿ ವಕೀಲರನ್ನು ಗುರುವಾರ ರಾಜಭವನಕ್ಕೆ ಕಳುಹಿಸಿದ್ದರು.
ರೆಡ್ಡಿ ಪರ ಸುಪ್ರೀಂಕೋರ್ಟ್ ವಕೀಲರಾದ ರಾಘವೇಂದ್ರಚಾರ್ಯಲು, ಚಂದ್ರಮೋಹನ್ ಮತ್ತು ರವಿಶಂಕರ್ ಅವರು ರಾಜ್ಯಪಾಲರ ಮನವೊಲಿಸಲು ಸಾಕಷ್ಟು ಕಸರತ್ತು ನಡೆಸಿದರೂ ಕೂಡ ಫಲಕಾರಿಯಾಗಿಲ್ಲ. ರೆಡ್ಡಿಯ ವರ್ತನೆಯಿಂದ ಆಕ್ರೋಶಗೊಂಡ ರಾಜ್ಯಪಾಲರು ರೆಡ್ಡಿ ವಿರುದ್ಧದ ದೂರನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ರವಾನೆ ಮಾಡಿದ್ದಾರೆ.