ಕೇಂದ್ರ ಸರಕಾರ ನಕ್ಸಲ್‌ಪೀಡಿತ ಪ್ರತಿ ಜಿಲ್ಲೆಗೆ ನೀಡುವ 200-300 ಕೋಟಿ ರೂ. ವಿಶೇಷ ಅಭಿವೃದ್ದಿ ಅನುದಾನ ಬಳಕೆ ನಿಟ್ಟಿನಲ್ಲಿ ನಕ್ಸಲ್‌ಪೀಡಿತ ಪ್ರದೇಶಗಳನ್ನು ಗುರುತಿಸಿ ಪ್ರಸ್ತಾವನೆ ಸಲ್ಲಿಸಲು ರಾಜ್ಯ ಸರಕಾರಕ್ಕೆ ಸೂಚಿಸಲಾಗಿದೆ ಎಂದು ಸಂಸದ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.
ಉಡುಪಿ ಬಳಕೆದಾರರ ವೇದಿಕೆ ವತಿಯಿಂದ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದಲ್ಲಿ ಜರುಗಿದ ಮುಖಾಮುಖಿಯಲ್ಲಿ ಅವರು ಮಾತನಾಡಿ, ರಾಜ್ಯದ ಪ್ರಸ್ತಾವನೆಗೆ ಮಾನ್ಯತೆ ನೀಡುವಂತೆ ಕೇಂದ್ರ ಸರಕಾರಕ್ಕೂ ಮನವಿ ಮಾಡಲಾಗಿದೆ ಎಂದರು.
ಸುಬ್ರಹ್ಮಣ್ಯ ರೈಲ್ವೆ ನಿಲ್ದಾಣವನ್ನು 15 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಿದ್ದು ಘಾಟ್‌ನಲ್ಲಿ ಸೆಕ್ಯುರಿಟ್ ಹಬ್ ನಿರ್ಮಿಸಲಾಗುವುದು. ಹಗಲು ರೈಲನ್ನು ಬೆಂಗಳೂರು-ಮಂಗಳೂರಿನಿಂದ ಕಾರವಾರದ ತನಕ ವಿಸ್ತರಿಸಿ ಏಳು ದಿನವೂ ಓಡಿಸುವ ಭರವಸೆ ದೊರೆತಿದೆ ಎಂದು ತಿಳಿಸಿದರು.
ಬೆಂಗಳೂರು-ಮಂಗಳೂರಿನಿಂದ ಕಣ್ಣೂರಿಗೆ ವಿಸ್ತರಿಸಿದ ರೈಲನ್ನು ಕಾರವಾರಕ್ಕೆ ವಿಸ್ತರಿಸುವುದನ್ನು ಇಲಾಖೆ ತಿರಸ್ಕರಿಸಿದೆ. ನಾಡು, ನುಡಿ, ನೀರು ಮತ್ತು ಗಡಿ ವಿಚಾರದಲ್ಲಿ ರಾಜ್ಯದ ಹಿತಾಸಕ್ತಿ ಕಾಪಾಡಲು ಕರ್ನಾಟಕದ ಸಂಸದರ ಸಂಘಟಿತ ಯತ್ನವಾಗುತ್ತಿಲ್ಲ ಎಂದು ದೂರಿದ ಅವರು, ನೆನೆಗುದಿಗೆ ಬಿದ್ದ ಕಡೂರು-ಚಿಕ್ಕಮಗಳೂರು ರೈಲ್ವೆ ಹಳಿ ನಿರ್ಮಾಣಕ್ಕೆ ಕೇಂದ್ರ 40 ಕೋಟಿ ರೂ. ಮಂಜೂರು ಮಾಡಿದೆ. ರಾಜ್ಯವೂ ಶೇ. 50 ಪಾಲು ನೀಡಿದೆ ಎಂದು ವಿವರಿಸಿದರು.
ಪರಿಸರದ ಹೆಸರಲ್ಲಿ ದುಡಿವ ಕೈಗಳಿಗೆ ಉದ್ಯೋಗ ಕೊಡುವಲ್ಲಿ ನಾವು ವಿಫಲರಾಗಿದ್ದೇವೆ. ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರವನ್ನು ಕಾನೂನಿನ ಚೌಕಟ್ಟಿನಲ್ಲಿ ನೀಡುವ ಯತ್ನ ನಡೆದಿದೆ. ಕೃಷಿ ಕ್ಷೇತ್ರ ಇನ್ನಷ್ಟು ಲಾಭದಾಯಕವಾಗಬೇಕು. ಶಿಕ್ಷಣ ವ್ಯವಸ್ಥೆಯಿಂದಾಗಿ ಕೃಷಿ ಕ್ಷೇತ್ರದಿಂದ ದೂರವಾದ ಯುವಕರನ್ನು ಸೆಳೆಯುವ ಕೆಲಸವಾಗಬೇಕು ಎಂದು ಅಭಿಪ್ರಾಯಪಟ್ಟರು.
ಭವಿಷ್ಯದಲ್ಲಿ ನೀರು ಮತ್ತು ಜಾಗತಿಕ ತಾಪಮಾನ ಏರಿಕೆಯೇ ಬಹುದೊಡ್ಡ ಸಮಸ್ಯೆಯಾಗಲಿದೆ. ಜನಪ್ರತಿನಿಗಳ ಮೌಲ್ಯಮಾಪನ ಪ್ರಜಾಪ್ರಭುತ್ವದ ಆರೋಗ್ಯಕರ ಬೆಳವಣಿಗೆ ಎಂದರು.