ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಇದೀಗ ಮೇಲ್ಮನೆ ಸಭಾಪತಿ ಸ್ಥಾನವೂ ಬಿಜೆಪಿ ಮಡಿಲಿಗೆ (BJP | Congress | JDS | Vidhana parishath | BBMP)
Bookmark and Share Feedback Print
 
ಬಿಬಿಎಂಪಿ, ಗ್ರಾ.ಪಂ.ಚುನಾವಣೆಗಳಲ್ಲಿ ಪ್ರಾಬಲ್ಯ ಸಾಧಿಸಿರುವ ಆಡಳಿತಾರೂಢ ಬಿಜೆಪಿ ಇದೀಗ ವಿಧಾನಪರಿಷತ್ತಿನ ಸಭಾಪತಿ ಮತ್ತು ಉಪ ಸಭಾಪತಿ ಸ್ಥಾನಗಳೂ ಕೂಡ ಬಿಜೆಪಿ ತೆಕ್ಕೆಗೆ ಬರಲಿದೆ.

ವಿಧಾನಸಭೆಯಿಂದ ವಿಧಾನಪರಿಷತ್ತಿನ ಏಳು ಸ್ಥಾನಗಳಿಗೆ ಗುರುವಾರ ಅವಿರೋಧ ಆಯ್ಕೆಯಾದ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಬಲಾಬಲದಲ್ಲಿ ಏರುಪೇರಾಗಲಿದೆ. ಎನ್.ತಿಪ್ಪಣ್ಣ, ಲೆಹರ್ ಸಿಂಗ್ ನಾಮಕರಣ ಸದಸ್ಯರಾಗಿ ಮೇಲ್ಮನೆ ಪ್ರವೇಶಿಸಿದ್ದಾರೆ. ಇದರಿಂದ ವಿಧಾನಪರಿಷತ್ತಿನಲ್ಲಿ ಬಿಜೆಪಿ ಸಂಖ್ಯಾಬಲ 39ಕ್ಕೆ ಏರಿದೆ.

ಜೂನ್ 14ರಂದು ವಿಧಾನಪರಿಷತ್ತಿನ ಸಭಾಪತಿ ವೀರಣ್ಣ ಮತ್ತಿಕಟ್ಟಿ ನಿವೃತ್ತಿಯಾಗಲಿದ್ದಾರೆ. ಮುಂದಿನ ಅಧಿವೇಶನದಲ್ಲಿ ಸಭಾಪತಿ ಆಯ್ಕೆ ನಡೆಯಲಿದ್ದು, ಅದು ಬಿಜೆಪಿ ಪಾಲಾಗಲಿದೆ. ಉಪಸಭಾಪತಿ ಪುಟ್ಟಣ್ಣ ಅವರ ನಿವೃತ್ತಿ ಅವಧಿ 2014ರವರೆಗೆ ಇದ್ದರೂ ಪದಚ್ಯುತಗೊಳಿಸುವ ಅವಕಾಶ ಬಿಜೆಪಿಗಿದೆ. ಆ ನಿಟ್ಟಿನಲ್ಲಿ ಸಭಾಪತಿ ಸ್ಥಾನಕ್ಕೆ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಡಿ.ಎಚ್.ಶಂಕರಮೂರ್ತಿ, ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರಗೌಡ ಅವರ ಹೆಸರು ಕೇಳಿಬರುತ್ತಿದೆ.

ಜೆಡಿಎಸ್‌ನಿಂದ ಎಂ.ಶ್ರೀನಿವಾಸ್, ಕಾಂಗ್ರೆಸ್‌ನಿಂದ ವೀರಣ್ಣ ಮತ್ತಿಕಟ್ಟಿ, ಆರ್.ವಿ.ವೆಂಕಟೇಶ್ ಅವರು ಆಯ್ಕೆಯಾಗುವ ಮೂಲಕ ಸದ್ಯಕ್ಕೆ ಅವೆರಡೂ ಪಕ್ಷಗಳ ಸಂಖ್ಯಾಬಲದಲ್ಲಿ ವ್ಯತ್ಯಾಸವಾಗಿಲ್ಲ, ಜೆಡಿಎಸ್ 15 ಹಾಗೂ ಕಾಂಗ್ರೆಸ್ 16ಸ್ಥಾನ ಹೊಂದಿದೆ.

ಆದರೆ, ಕನ್ನಡ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮತ್ತು ಜಿ.ಎಂ.ಮಧುಮಾದೇಗೌಡ ಜೂನ್ 14ರಂದು ನಿವೃತ್ತಿಯಾಗಲಿದ್ದಾರೆ. ಅಲ್ಲದೆ ಶಿಕ್ಷಕರ ಕ್ಷೇತ್ರದ ಎರಡು ಹಾಗೂ ಪದವೀಧರ ಕ್ಷೇತ್ರದ ಎರಡು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಈ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆದ ಬಳಿಕ ರಾಜಕೀಯ ಪಕ್ಷಗಳ ಬಲಾಬಲದಲ್ಲಿ ಇನ್ನಷ್ಟು ವ್ಯತ್ಯಾಸವಾಗಲಿದೆ. ಆದರೂ ಪ್ರತಿಪಕ್ಷಗಳ ಬಲ ಆಡಳಿತ ಪಕ್ಷಕ್ಕಿಂತ ಕಡಿಮೆಯಾಗಲಿದ್ದು ಸಭಾಪತಿ ಮತ್ತು ಉಪಸಭಾಪತಿ ಆಯ್ಕೆ ಬಿಜೆಪಿಗೆ ಸುಗಮವಾಗಲಿದೆ.
ಸಂಬಂಧಿತ ಮಾಹಿತಿ ಹುಡುಕಿ