ರಾಸಲೀಲೆ ಪ್ರಕರಣದಲ್ಲಿ ಬಂಧಿತನಾಗಿದ್ದ ನಿತ್ಯಾನಂದ ಸ್ವಾಮಿ ಶನಿವಾರ ರಾಮನಗರ ಕೋರ್ಟ್ ಅನುಮತಿಯೊಂದಿಗೆ ಬಿಡುಗಡೆಗೊಂಡು ಬಿಡದಿ ಆಶ್ರಮ ಸೇರಿಕೊಂಡಿದ್ದರು. ಇದೀಗ ಲೋಕಕಲ್ಯಾಣಕ್ಕಾಗಿ ಆಶ್ರಮದಲ್ಲಿ ಭಾನುವಾರ ಪಂಚಾಗ್ನಿ ತಪಸ್ಯ ಕೈಗೊಂಡಿದ್ದಾರೆ ಎಂದು ಆಶ್ರಮದ ಮೂಲಗಳು ತಿಳಿಸಿವೆ.
ಭಾನುವಾರ ಬೆಳಿಗ್ಗೆ 6.30ರ ಹೊತ್ತಿಗೆ ನಿತ್ಯಾನಂದ ಸ್ವಾಮಿ ಬಿಡದಿ ಆಶ್ರಮದಲ್ಲಿ ಲೋಕಕಲ್ಯಾಣಕ್ಕಾಗಿ ಪಂಚಾಗ್ನಿ ತಪಸ್ಯ ಆರಂಭಿಸಿದ್ದರು. ನಂತರ ಸುಮಾರು ಎರಡು ಗಂಟೆಗಳ ಕಾಲದಲ್ಲಿ ತಪಸ್ಸು ಅಂತ್ಯಗೊಂಡಿತ್ತು ಎಂದು ಆಶ್ರಮದ ವಕ್ತಾರೆ ನಿತ್ಯ ಶಾಂತಾನಂದ ತಿಳಿಸಿದ್ದಾರೆ.
ಆಶ್ರಮದಲ್ಲಿ ಭಕ್ತರ ದಂಡೇ ನೆರಿದಿದ್ದು, ವಿಶೇಷ ಪೂಜೆ, ಹವನ ನಡೆಯುತ್ತಿದೆ. ವಿದೇಶಗಳಿಂದ, ಬೇರೆ, ಬೇರೆ ರಾಜ್ಯಗಳಿಂದ ನೂರಾರು ಭಕ್ತರು ದೂರವಾಣಿ ಮೂಲಕ ಸ್ವಾಮೀಜಿಯ ಬಗ್ಗೆ ವಿಚಾರಿಸುತ್ತಿರುವುದಾಗಿಯೂ ಆಶ್ರಮದ ಮೂಲಗಳು ಹೇಳಿವೆ.
ದುಷ್ಟ ಶಕ್ತಿ ನಿಗ್ರಹಿಸಲು ಮತ್ತು ಲೋಕಕಲ್ಯಾಣಕ್ಕಾಗಿ ನಿತ್ಯಾನಂದ ಸ್ವಾಮಿ ಪಂಚಾಗ್ನಿ ತಪಸ್ಯ ಕೈಗೊಂಡಿದ್ದಾರೆ. ಇಂದು ಕೇವಲ ಎರಡು ಗಂಟೆ ಮಾತ್ರ ಮಾಡಿದ್ದಾರೆ. ನಾಳೆಯೂ ತಪಸ್ಸು ಮುಂದುವರಿಯಲಿದ್ದು, ಅದು ಮುಂದಿನ ದಿನಗಳಲ್ಲಿ ಸಮಯ ಹೆಚ್ಚಾಗುತ್ತ ಹೋಗಲಿದೆ ಎಂದು ನಿತ್ಯಶಾಂತಾನಂದ ತಿಳಿಸಿದ್ದಾರೆ.