ದಕ್ಷಿಣ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ನನ್ನ ಸೋಲಿಗೆ ಬಿಜೆಪಿ ನಡೆಸಿದ ಅಧಿಕಾರ ದುರುಪಯೋಗ, ಷಡ್ಯಂತ್ರ ಕಾರಣ ಎಂದು ಪರಾಜಿತ ಜೆಡಿಎಸ್ ಅಭ್ಯರ್ಥಿ ಕೆ.ಟಿ.ಶ್ರೀಕಂಠೇಗೌಡ ಆರೋಪಿಸಿದ್ದಾರೆ.
ಮತಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಿಂದ ಮತ ಎಣಿಕೆವರೆಗೆ ಎಲ್ಲಾ ಹಂತದಲ್ಲಿ ಆಡಳಿತ ಯಂತ್ರದ ದುರ್ಬಳಕೆ ನಡೆದಿದೆ. 'ಶಿಸ್ತಿನ ಪಕ್ಷ' ಎಂದು ಹೇಳಿಕೊಳ್ಳುವವರು ಉಳಿದವರೆಲ್ಲ ನಾಚಿಕೆ ಪಡುವಷ್ಟು ವಾಮಮಾರ್ಗ ಅನುಸರಿಸಿದರು. ಆದರೂ ಗೆಲುವು ಸಾಧ್ಯವಾಗಿದ್ದು 25ನೇ ಸುತ್ತಿನಲ್ಲಿ, ನನ್ನ 2ನೇ ಪ್ರಾಶಸ್ತ್ಯದ ಮತ ಪಡೆದ ನಂತರ. ಆದ್ದರಿಂದ ಬಿಜೆಪಿ ಬೀಗುವ ಅಗತ್ಯವಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ತಿಳಿಸಿದರು.
ಪ್ರತಿ ಮತದಾನ ಕೇಂದ್ರಗಳಿಂದ 50, 60ಮಂದಿ ಹಕ್ಕು ಚಲಾಯಿಸಲು ಅವಕಾಶ ಸಿಗದೆ ವಾಪಸಾಗಿದ್ದಾರೆ. ಬದುಕಿದ್ದವರನ್ನು ಸಾಯಿಸಿರುವ, ಹಲವು ವರ್ಷಗಳಿಂದ ಸ್ವಂತ ಮನೆಯಲ್ಲಿರುವವರನ್ನು ಪಟ್ಟಿಯಿಂದ ಕೈಬಿಟ್ಟಿರುವ ನೂರಾರು ಪ್ರಕರಣಗಳು ನಡೆದಿದ್ದು, ನಾಲ್ಕು ಜಿಲ್ಲೆಯ ಆರೇಳು ಸಾವಿರ ಅರ್ಹ ಮತದಾರರನ್ನು ವಂಚಿತರನ್ನಾಗಿ ಮಾಡಲಾಗಿದೆ. ಇದರ ಹಿಂದೆ ರಾಜ್ಯ ಸರಕಾರದ ವ್ಯವಸ್ಥಿತ ಷಡ್ಯಂತ್ರ ಇದೆ ಎಂದು ದೂರಿದರು.
ಹಿಂದಿನ ಪರಿಷತ್ ಚುನಾವಣೆಗಳಲ್ಲಿ ಸ್ವೀಕೃತಿ ಪತ್ರ ತಂದವರೂ ಹಕ್ಕು ಚಲಾಯಿಸಬಹುದಿತ್ತು. ಈ ಬಾರಿ ಕೊನೆಗಳಿಗೆಯಲ್ಲಿ ಯಾವುದಾದರೂ ಫೋಟೋ ಗುರುತಿನ ಚೀಟಿ ಕಡ್ಡಾಯಗೊಳಿಸಿದ್ದರಿಂದ ನೂರಾರು ಮಂದಿ ಮತದಾನದಿಂದ ವಂಚಿತರಾದರು. ದಿನಾಂಕ ಮುಂದೆ ಹೋಗಿದ್ದರಿಂದ ಶೇಕಡವಾರು ಪ್ರಮಾಣ ಕುಸಿಯಿತು. ಮುಖ್ಯಮಂತ್ರಿ, ಮಂತ್ರಿಗಳೇ ನೌಕರರು, ಅಧಿಕಾರಿಗಳ ಜತೆ ಸಂವಾದದ ನೆಪದಲ್ಲಿ ಭರವಸೆ ನೀಡಿ ಪ್ರಭಾವ ಬೀರಿದ್ದು ,ಹೊಸ ಅಭ್ಯರ್ಥಿಗಳು ಒಂದೊಂದೇ ಮತ ಕೇಳಿ 2ನೇ ಪ್ರಾಶಸ್ತ್ಯದ ಮತ ವರ್ಗಾವಣೆಯನ್ನು ತಪ್ಪಿಸಿದ್ದು ನನ್ನ ಸೋಲಿಗೆ ಕಾರಣ ಎಂದು ವಿಶ್ಲೇಷಿಸಿದರು.