ಬಳ್ಳಾರಿಗೆ ಬನ್ನಿ ನೋಡಿಕೊಳ್ತೇವೆ ಎಂಬ ಸಚಿವ ಜನಾರ್ದನ ರೆಡ್ಡಿಯವರ ಸವಾಲನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸ್ವೀಕರಿಸಿದ್ದಾರೆ. ಬಳ್ಳಾರಿಯಲ್ಲಿಯೇ ಕಾಂಗ್ರೆಸ್ ರ‌್ಯಾಲಿ ನಡೆಸುತ್ತೇವೆ, ಏನು ಮಾಡುತ್ತಾರೋ ನೋಡೋಣ ಎಂದು ಅವರು ಹೇಳಿದ್ದಾರೆ.
ಶುಕ್ರವಾರ ಸದನದಲ್ಲಿ ಕೋಲಾಹಲ ನಡೆಯುತ್ತಿದ್ದ ಸಂದರ್ಭದಲ್ಲಿ 'ಬಳ್ಳಾರಿ ಬನ್ನಿ, ನಿಮ್ಮನ್ನು ನೋಡಿಕೊಳ್ತೇವೆ' ಎಂಬ ಮಾತು ರೆಡ್ಡಿಗಳ ಕಡೆಯಿಂದ ಬಂದಿತ್ತು. ಇದನ್ನು ಪತ್ರಿಕಾಗೋಷ್ಠಿಯಲ್ಲಿ ಉಲ್ಲೇಖಿಸಿದ ಸಿದ್ದು, ನಾವು ಬಳ್ಳಾರಿಗೆ ಮಾತ್ರವಲ್ಲ, ರೆಡ್ಡಿಗಳ ಮನೆಯ ಹತ್ತಿರವೂ ಬರುತ್ತೇವೆ. ಎಲ್ಲಿ ಬೇಕಾದರೂ ನಾವು ರ‌್ಯಾಲಿ ನಡೆಸುತ್ತೇವೆ. ಯಾರು ಏನು ಮಾಡುತ್ತಾರೋ ನೋಡೋಣ ಎಂದು ಪ್ರತಿ ಸವಾಲು ಹಾಕಿದರು.
ಸರಕಾರದ ಜನವಿರೋಧಿ ನೀತಿ ವಿರುದ್ದ ನಾವು ಪ್ರತಿಭಟನೆ ನಡೆಸುತ್ತೇವೆ. ಇದು ಬಳ್ಳಾರಿಗೆ ಮಾತ್ರ ಸೀಮಿತವಲ್ಲ, ರಾಜ್ಯದ ಎಲ್ಲಾ ಭಾಗಗಳಿಗೂ ಹೋಗುತ್ತೇವೆ. ಇಲ್ಲಿ ಹಿಂಜರಿಕೆ ಪ್ರಶ್ನೆಯೇ ಇಲ್ಲ. ಹೆದರಿಕೆ ಮೊದಲೇ ಇಲ್ಲ ಎಂದು ಕಾಂಗ್ರೆಸ್ ನಾಯಕ ಸ್ಪಷ್ಟಪಡಿಸಿದ್ದಾರೆ.
ಬಳ್ಳಾರಿಯಲ್ಲಿ ರ‌್ಯಾಲಿ ನಡೆಸುವ ದಿನಾಂಕವನ್ನು ಕಾಂಗ್ರೆಸ್ ಪ್ರಕಟಿಸಿಲ್ಲ. ಆದರೆ ಇನ್ನು ಕೆಲವೇ ವಾರಗಳೊಳಗೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ಅದೇ ಹೊತ್ತಿಗೆ ಸದನದಲ್ಲಿ ಬೆದರಿಕೆ ಹಾಕಿರುವ ಶಾಸಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಭಾಧ್ಯಕ್ಷರಿಗೆ ಮನವಿ ಮಾಡಿಕೊಂಡಿದ್ದೇವೆ ಎಂದಿರುವ ಅವರು, ನಮಗೆ ಇದುವರೆಗೆ ಸದನದ ಹೊರಗಡೆ ಮಾತ್ರ ಜೀವ ಬೆದರಿಕೆಯಿತ್ತು; ಈಗ ಸದನದೊಳಗೂ ಆ ಪರಿಸ್ಥಿತಿ ನೆಲೆಸಿದೆ. ಇದು ಪ್ರಜಾಪ್ರಭುತ್ವ ಉಳ್ಳ ರಾಜ್ಯವೆಂದು ಅನ್ನಿಸುತ್ತಿಲ್ಲ ಎಂದರು.
ಮಂತ್ರಿಗಳೇ ಈ ರೀತಿ ನಡೆದುಕೊಳ್ಳುತ್ತಾರೆಂದಾಗ ಮೊದಲು ಪೊಲೀಸರಿಗೆ ದೂರು ನೀಡುವ ನಿರ್ಧಾರಕ್ಕೆ ಬರಲಾಗಿತ್ತು. ಆದರೆ ಸದನ ಸಭಾಧ್ಯಕ್ಷರ ಆಧೀನದಲ್ಲಿ ಬರುವುದರಿಂದ ಅವರೇ ಕ್ರಮ ಕೈಗೊಳ್ಳಲಿ ಎಂದು ಅವರ ವಿವೇಚನೆಗೆ ಬಿಡಲಾಗಿದೆ ಎಂದು ಅವರು ತಿಳಿಸಿದ್ದಾರೆ.