ಲೋಕಾಯುಕ್ತರಿಗೆ ಪರಮಾಧಿಕಾರ ಇಲ್ಲ, ಹೆಚ್ಚಿನ ಅಧಿಕಾರ ಕೊಡುತ್ತೇವೆ. ಇಂದಿನಿಂದ ಕಾರ್ಯದರ್ಶಿಗಳು ಮುಖ್ಯ ಕಾರ್ಯದರ್ಶಿಗಳು, ಲೋಕಾಯುಕ್ತರ ವ್ಯಾಪ್ತಿಗೆ ಬರುತ್ತಾರೆ. ಆದರೆ ಮುಖ್ಯಮಂತ್ರಿ, ಶಾಸಕರು, ಸಚಿವರುಗಳಿಗೆ ಲೋಕಾಯುಕ್ತ ವ್ಯಾಪ್ತಿಗೆ ಸೇರ್ಪಡೆಗೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ವಿಧಾನಮಂಡಲ ಅಧಿವೇಶನದಲ್ಲಿ ಘೋಷಿಸಿದರು.
ಇದು ವಿಧಾನಸಭೆಯಲ್ಲಿ ಕಳೆದ ಐದು ದಿನಗಳ ಕಾಲ ನಿಯಮ 69ರ ಅಡಿಯಲ್ಲಿ ನಡೆದ ಸುದೀರ್ಘ ಚರ್ಚೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೊಟ್ಟ ಉತ್ತರ ಇದಾಗಿದೆ. ಹಾವು ಸಾಯಲೂ ಬಾರದು, ಕೋಲು ಮುರಿಯಲೂಬಾರದು ಎಂಬಂತೆ ವಿರೋಧ ಪಕ್ಷಗಳ ಬೇಡಿಕೆಗೆ ಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ ಎಂದು ಸದನಕ್ಕೆ ತಿಳಿಸಿದರು.
ಲೋಕಾಯುಕ್ತರ ವ್ಯಾಪ್ತಿಗೆ ಮುಖ್ಯಮಂತ್ರಿಗಳು, ಮಂತ್ರಿಗಳು, ಶಾಸಕರು, ನಾಮನಿರ್ದೇಶಿತ ಸದಸ್ಯರನ್ನು ಹೊರತುಪಡಿಸಿ ಅಧಿಕಾರಿಗಳ ಮೇಲೆ ಸ್ವಯಂಪ್ರೇರಿತವಾಗಿ ದಾಳಿ ಮಾಡಿ, ವಿಚಾರಣೆಗೆ ಒಳಪಡಿಸುವ ಅಧಿಕಾರ ಕೊಡಲಾಗಿದೆ. ಮುಖ್ಯಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳ ಮೇಲೆ ದಾಳಿ ಮಾಡಬಹುದು. ಆದರೆ ಇದಕ್ಕೆ ಸರ್ಕಾರದ ಪೂರ್ನಾನುಮತಿಯ ಅಗತ್ಯ ಬೇಕು ಎಂದು ಮುಖ್ಯಮಂತ್ರಿಗಳು ಹೇಳಿದರು.
ಸ್ವ ಪ್ರೇರಣೆಯಿಂದ ತನಿಖೆ ನಡೆಸಲು ಉದ್ದೇಶಿಸಿದ ಸಂದರ್ಭದಲ್ಲಿ ಲೋಕಾಯುಕ್ತರು ಅಥವಾ ಉಪಲೋಕಾಯುಕ್ತರು ದಾಖಲಿಸಿದ ಅಭಿಪ್ರಾಯವನ್ನು ಸಂಬಂಧಿತ ಸಾರ್ವಜನಿಕ ನೌಕರರಿಗೆ ಮತ್ತು ಸಂಬಂಧಿತ ಸಕ್ಷಮ ಪ್ರಾಧಿಕಾರಕ್ಕೆ ನೀಡಬೇಕು ಮತ್ತು ಅದರ ಬಗ್ಗೆ ತನ್ನ ಅಹವಾಲನ್ನು ತಿಳಿಸಲು ಸಂಬಂಧಿತ ಸಾರ್ವಜನಿಕ ನೌಕರರಿಗೆ ಒಂದು ಅವಕಾಶ ನೀಡುವಂತೆ ತಿದ್ದುಪಡಿ ಮಾಡಲಾಗಿದೆ.
ಮುಖ್ಯಮಂತ್ರಿ, ಸಚಿವರು, ವಿಧಾನಮಂಡಲದ ಸದಸ್ಯರು ಮತ್ತು ಸರ್ಕಾರದಿಂದ ನಾಮನಿರ್ದೇಶನಗೊಂಡಂತಹ ಸಾರ್ವಜನಿಕ ನೌಕರರನ್ನು ಬಿಟ್ಟು 20ಸಾವಿರಕ್ಕಿಂತ ಹೆಚ್ಚು ವೇತನ ಪಡೆಯುವ ಅಧಿಕಾರಿಗಳನ್ನು ಸ್ವಪ್ರೇರಣೆಯಿಂದ ತನಿಖೆಗೊಳಪಡಿಸುವ ಅಧಿಕಾರ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಏತನ್ಮಧ್ಯೆ ಸರ್ಕಾರದ ಉತ್ತರ ಖಂಡಿಸಿ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದಾಗ ಕೋಲಾಹಲ ನಡೆಯಿತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ನಡುವೆ ಮಾತಿನ ಚಕಮಕಿ ನಡೆಯಿತು. ಒಂದು ಹಂತದಲ್ಲಿ ಪರಸ್ಪರ ತೋಳೇರಿಸುವ ಮಟ್ಟಕ್ಕೂ ಹೋಯಿತು.
ಸರಕಾರ ಅರ್ಧ ಅಧಿಕಾರ ಮಾತ್ರ ಕೊಟ್ಟಂತಾಗಿದೆ-ಹೆಗ್ಡೆ: ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ನೀಡುತ್ತೇವೆ ಎಂದು ಭರವಸೆ ನೀಡಿದ್ದ ಸರ್ಕಾರ ಇಂದು ವಿಧಾನಮಂಡಲದಲ್ಲಿ ಘೋಷಿಸಿರುವ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿರುವ ನ್ಯಾ.ಸಂತೋಷ್ ಹೆಗ್ಡೆ, ಸರಕಾರ ಅರ್ಧ ಅಧಿಕಾರವನ್ನಷ್ಟೇ ನೀಡಿದೆ ಎಂದರು.
ಸರಕಾರದ ನಿರ್ಧಾರದಿಂದ ನನಗೆ ಅಸಮಾಧಾವಾಗಿದೆ ಎಂದ ಅವರು, ನಾನು ಕೇಳಿದ್ದಕ್ಕೆ ಸರಕಾರ ಕೇವಲ ಅರ್ಧ ಅಧಿಕಾರವನ್ನಷ್ಟೇ ನೀಡಿದಂತಾಗಿದೆ. ಆದರೂ ಸರಕಾರ ನೀಡಿರುವ ಅಧಿಕಾರದ ವ್ಯಾಪ್ತಿಯಲ್ಲೇ ಕಾರ್ಯನಿರ್ವಹಿಸುವುದಾಗಿ ಹೇಳಿದರು.