ವಿರೋಧ ಪಕ್ಷ ಸ್ಥಾನದಲ್ಲಿರುವ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಅಧಿಕಾರದ ಗದ್ದುಗೆ ಇಲ್ಲದ ಪರಿಣಾಮ ವಿಧಾನಮಂಡಲದ ಕಲಾಪ ನಡೆಯದಂತೆ ಅನಾವಶ್ಯಕವಾಗಿ ಕೋಲಾಹಲ ಎಬ್ಬಿಸುತ್ತಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಕಲಾಪದಲ್ಲಿ ಗದ್ದಲ ಎಬ್ಬಿಸುತ್ತಿರುವ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್, ಜೆಡಿಎಸ್‌ಗೆ ಅಧಿಕಾರ ಇಲ್ಲದಿದ್ದರಿಂದ ರಾಜ್ಯದ ಜನತೆಯ ದಿಕ್ಕು ತಪ್ಪಿಸಲು ಆಡಳಿತಾರೂಢ ಬಿಜೆಪಿ ಪಕ್ಷದ ವಿರುದ್ಧ ಗೂಬೆ ಕೂರಿಸುವ ಯತ್ನ ಮಾಡುತ್ತಿವೆ ಎಂದು ಆರೋಪಿಸಿದರು.
ನಮಗೆ ರಾಜ್ಯ ಮತ್ತು ಕೇಂದ್ರದಲ್ಲಿ ಹೇಳೋರು, ಕೇಳುವವರು ಇದ್ದಾರೆ. ಆದರೆ ಕಾಂಗ್ರೆಸ್‌ಗೆ ಯಾರೂ ಇಲ್ಲ. ಜೆಡಿಎಸ್ ರಾಜ್ಯಕ್ಕೆ ಮಾತ್ರ ಸೀಮಿತವಾಗಿದೆ. ಇದೀಗ ವಿರೋಧ ಪಕ್ಷದ ಸ್ಥಾನದಲ್ಲಿರುವ ಇವೆರಡು ಪಕ್ಷಗಳು ಟೀಕಿಸುವುದರಲ್ಲಿಯೇ ಕಾಲ ಕಳೆಯುತ್ತಿವೆ ಎಂದರು.
ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಅವರು ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟಾಗ ಏನೆಲ್ಲಾ ನಾಟಕ ಆಡಿದ್ದಾರೆ ಎಂಬುದು ಕೂಡ ತಮಗೆ ತಿಳಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈಗಾಗಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ರಾಜ್ಯದ ಜನರು ಬುದ್ದಿ ಕಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಪಕ್ಷಗಳು ಮತ್ತಷ್ಟು ತಲೆದಂಡ ತೆರಲಿವೆ ಎಂದು ಭವಿಷ್ಯ ನುಡಿದರು.