ಉದ್ಯಾನನಗರಿಯಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎನ್ನಲಾದ ಕೇರಳ ಪಿಡಿಪಿ ವರಿಷ್ಠ ಅಬ್ದುಲ್ ನಾಸೀರ್ ಮದನಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ಶುಕ್ರವಾರ ವಜಾಗೊಳಿಸಿದೆ.
ನಗರದ 5ನೇ ತ್ವರಿತ ನ್ಯಾಯಾಲಯದಲ್ಲಿ ಸರಣಿ ಬಾಂಬ್ ಸ್ಫೋಟದ ಬಗ್ಗೆ ವಿಚಾರಣೆಯಲ್ಲಿ ವಾದ-ಪ್ರತಿವಾದ ಆಲಿಸಿದ ನ್ಯಾ.ಶ್ರೀಕಾಂತ್ ವಟವಟಿ ಈ ಆದೇಶ ನೀಡಿದ್ದಾರೆ. ಆದರೆ ಈ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರುವುದಾಗಿ ಮದನಿ ನಿರ್ಧರಿಸಿದ್ದಾರೆ.
ಮದನಿ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ಮೂರು ಬಾರಿ ಮುಂದೂಡಲಾಗಿತ್ತು. ಯಾವುದೇ ಕಾರಣಕ್ಕೂ ಅವರಿಗೆ ನಿರೀಕ್ಷಣಾ ಜಾಮೀನು ನೀಡಬಾರದೆಂದು ತನಿಖೆ ನಡೆಸುತ್ತಿರುವ ಸಿಸಿಬಿ ಅಧಿಕಾರಿಗಳು ಮತ್ತು ಸರ್ಕಾರಿ ವಕೀಲರು ಅರ್ಜಿ ಸಲ್ಲಿಸಿದ್ದರು.
ತ್ವರಿತ ನ್ಯಾಯಾಲಯದ ತೀರ್ಪು ತಮಗೆ ಅಸಮಾಧಾನ ತಂದಿದೆ ಎಂದು ಪಿಡಿಪಿ ಅಧ್ಯಕ್ಷ ಅಬ್ದುಲ್ ಅಜೀಜ್ ತಿಳಿಸಿದ್ದು, ಆದ್ದರಿಂದ ತೀರ್ಪು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.
ಸಿಲಿಕಾನ್ ಸಿಟಿಯ ಜನರನ್ನು ಆತಂಕಕ್ಕೆ ಒಡ್ಡಿದ ಸರಣಿ ಬಾಂಬ್ ಸ್ಫೋಟದ ಕುರಿತು ಅಧಿಕಾರಿಗಳು ಸಮಗ್ರ ಮಾಹಿತಿ ಕಲೆ ಹಾಕಿ, ಮದನಿಯನ್ನು ಬಂಧಿಸಬೇಕು ಎಂದು ಸರ್ಕಾರಿ ವಕೀಲ ರುದ್ರಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡುತ್ತ ವಿವರಿಸಿದ್ದಾರೆ.