ಮಳೆಯಿಲ್ಲದೇ ಕಂಗಾಲಾಗಿರುವ ಇಲ್ಲಿನ ಗ್ರಾಮಸ್ಥರು, ವರುಣನ ಕೃಪೆಗಾಗಿ ವಿಜೃಂಭಣೆಯಿಂದ ಕಪ್ಪೆಗಳ ಮದುವೆ ನೆರವೇರಿಸಿದ ಘಟನೆ ನಡೆಯಿತು.
ಇಲ್ಲಿನ ಕೋಟೆಬೀದಿ ಸೊಪ್ಪಿನಹಳ್ಳಿಯ ಭೈರಲಿಂಗೇಶ್ವರ ಹಾಗೂ ಮೈಲಾರ ಲಿಂಗೇಶ್ವರ ದೇವಾಲಯದ ಮುಂಭಾಗ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಗುರುವಾರ ರಾತ್ರಿ ನಡೆದ ಮದುವೆಗೆ ನೂರಾರು ಗ್ರಾಮಸ್ಥರು ಸಾಕ್ಷಿಯಾದರು.
ಗ್ರಾಮದೇವತೆ ಕರಿಯಮ್ಮಳನ್ನು ಪ್ರಾರ್ಥಿಸಿದ ಬಳಿಕ ಕಳಶ ಸ್ಥಾಪಿಸಿ, ಕಪ್ಪೆಗಳಿಗೆ ಮಾಂಗಲ್ಯ ಧಾರಣೆ ಮಾಡಿಸಲಾಯಿತು. ಕಪ್ಪೆ ವಿವಾಹಕ್ಕೆ ಆಗಮಿಸಿದ್ದವರೆಲ್ಲರಿಗೂ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ಮದುವೆ ಪ್ರಯುಕ್ತ ಗ್ರಾಮದಲ್ಲಿ ಕಳೆದ ಒಂಬತ್ತು ದಿನಗಳಿಂದಲೇ ಭಜನೆ, ಗೀಗೀಪದ ಹಾಗೂ ನಾನಾ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿತ್ತು. ಅಲ್ಲದೆ ಮದುವೆ ಸಿದ್ಧತೆಗಾಗಿ ಮಹಿಳೆಯರು ಪಡಿಬೇಡುವ ಮೂಲಕ ಹಣ ಸಂಗ್ರಹಿಸಿದ್ದರು.