ಚನ್ನಪಟ್ಟಣ ಸ್ಪನ್ ಸಿಲ್ಕ್ ಮಿಲ್ಸ್ (ರೇಷ್ಮೆ ಜೂಟು ಗಿರಣಿ) ಪುನಾರಂಭಿಸಲು 20 ಕೋಟಿ ರೂ. ನೀಡಬೇಕೆಂಬ ಕರ್ನಾಟಕ ರೇಷ್ಮೆ ಉದ್ಯಮ ನಿಗಮ(ಕೆಎಸ್ಐಸಿ)ದ ಮನವಿಗೆ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದು, 20 ಮಗ್ಗಗಳ ಗಿರಣಿ ಆರಂಭವಾಗುವುದು ಖಚಿತ ಎಂದು ನಿಗಮದ ಅಧ್ಯಕ್ಷ ಸಿ. ಪಿ. ಯೋಗೇಶ್ವರ ತಿಳಿಸಿದ್ದಾರೆ.
ಸದ್ಯಕ್ಕೆ ನಿಗಮ ಉತ್ಪಾದಿಸುತ್ತಿರುವ ಸೀರೆಗಳ ಬೆಲೆ 6,800 ರೂ.ನಿಂದ ಆರಂಭ. ಇದರಿಂದ ಮಧ್ಯಮ ವರ್ಗದ ಗ್ರಾಹಕರ ಬೇಡಿಕೆ ಪೂರೈಸಲಾಗುತ್ತಿಲ್ಲ. ಆದ ಕಾರಣ 2500-3000 ರೂ. ಮೌಲ್ಯದ ಸೀರೆಗಳನ್ನು ಉತ್ಪಾದಿಸಲು ಮುಚ್ಚಿರುವ ಚನ್ನಪಟ್ಟಣದ ಗಿರಣಿಯನ್ನು ಪುನರಾರಂಭಿಸಲಾಗುವುದು. ಗುತ್ತಿಗೆ ಆಧಾರದ ಮೇಲೆ ನೌಕರರನ್ನು ನೇಮಿಸಿಕೊಳ್ಳಲಾಗುವುದು ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.
ನಿಗಮ ಕಳೆದ ಸಾಲಿನಲ್ಲಿ 80 ಸಾವಿರ ರೇಷ್ಮೆ ಸೀರೆಗಳನ್ನು ಮಾರಾಟ ಮಾಡಿದೆ. ಆದರೆ, ಬೇಡಿಕೆಗೆ ಅನುಗುಣವಾಗಿ ಸೀರೆಗಳನ್ನು ಉತ್ಪಾದಿಸಲಾಗುತ್ತಿಲ್ಲ. ಉತ್ಪಾದನೆ ಹೆಚ್ಚಿಸುವ ಸಂಬಂಧ ಮೈಸೂರು ಕಾರ್ಖಾನೆಯಲ್ಲಿ ಎರಡು ಪಾಳಿಯಲ್ಲಿ ನಿರ್ವಹಿಸಲು ಚಿಂತನೆ ನಡೆಸಲಾಗಿದೆ ಎಂದರು.
ಚನ್ನಪಟ್ಟಣ ಘಟಕದಿಂದ ಬೇಡಿಕೆಗೆ ಅನುಗುಣವಾಗಿ ರೇಷ್ಮೆ ಉತ್ಪಾದನೆಯಾದರೆ, ಸಹಕಾರ ಸಂಸ್ಥೆಗಳಿಂದ ರೇಷ್ಮೆ ಖರೀದಿ ನಿಲ್ಲಿಸಲಾಗುವುದು ಎಂದು ಸ್ಪಷ್ಟಪಡಿಸಿದರು. ಬೆಳಗಾವಿ, ಹುಬ್ಬಳ್ಳಿ, ಶಿವಮೊಗ್ಗ ಹಾಗೂ ತಮಿಳುನಾಡಿನ ಕಾಂಚೀಪುರಂನಲ್ಲಿ ಕೆಎಸ್ಐಸಿ ಮಳಿಗೆ ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು.