ಜಿಲ್ಲೆಯ ಸಚಿವರು ಹಾಗೂ ಶಾಸಕರು ಬೀದಿ ರೌಡಿಗಳಂತೆ ವರ್ತಿಸಿ ಸದನದ ಮರ್ಯಾದೆ ಕಳೆದಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ. ದಿವಾಕರ ಬಾಬು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಪಕ್ಷಗಳ ವಿರುದ್ಧ ಕ್ಷುಲ್ಲಕವಾಗಿ ಮಾತನಾಡಿರುವ ಜಿಲ್ಲೆಯ ಸಚಿವರು ಹಾಗೂ ಶಾಸಕರು ಇಡೀ ಬಳ್ಳಾರಿ ಜಿಲ್ಲೆಯ ಜನತೆ ತಲೆ ತಗ್ಗಿಸುವಂತೆ ಮಾಡಿದ್ದಾರೆ. ಸದನದಲ್ಲಿ ಈ ರೀತಿಯ ಬೆಳವಣಿಗೆ ಹಿಂದೆಂದೂ ನಡೆದಿರಲಿಲ್ಲ ಎಂದರು.
ಬಿಹಾರ ಮತ್ತಿತರ ರಾಜ್ಯಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದವು. ಆದರೆ, ಬಳ್ಳಾರಿಯ ಜನಪ್ರತಿನಿಗಳು ಎನಿಸಿಕೊಂಡವರು ಬಿಹಾರವನ್ನೂ ಮೀರಿಸುವಂತೆ ಸದನದಲ್ಲಿ ವರ್ತಸಿದ್ದಾರೆ ಎಂದು ಟೀಕಿಸಿದರು.
ಸದನದಲ್ಲಿ ಶುಕ್ರವಾರ ಜರುಗಿದ ಘಟನೆ ಬಿಜೆಪಿ ಸಂಸ್ಕೃತಿಯನ್ನು ತೋರಿಸಿಕೊಟ್ಟಿದೆ. ಸದನದ ಶಿಸ್ತು ಹಾಳು ಮಾಡಿದವರ ವಿರುದ್ಧ ಸ್ಪೀಕರ್ ಕಠಿಣ ಕ್ರಮ ಕೈಗೊಳ್ಳಬೇಕು. ಅಶಿಸ್ತಿಗೆ ಕಾರಣರಾದವರನ್ನು ಕೂಡಲೇ ಅಮಾನತು ಮಾಡಬೇಕು. ಇಂತಹ ಜನರನ್ನು ಮುಂದಿನ ಚುನಾವಣೆಯಿಂದ ದೂರ ಇಡಬೇಕು ಎಂದು ಒತ್ತಾಯಿಸಿದರು.
ಅಂಕೋಲಾದ ಬೇಲೇಕೆರೆ ಬಂದರಿನಲ್ಲಿ ಇತ್ತೀಚೆಗೆ ದೊರೆತ 35 ಲಕ್ಷ ಟನ್ ಅಕ್ರಮ ಅದಿರನ್ನು ಆಂಧ್ರ ಪರ್ಮಿಟ್ನಿಂದ ಸಾಗಿಸಲಾಗಿದೆ ಎಂಬ ಮಾಹಿತಿ ಇದೆ. ಇದರಲ್ಲಿ ರೆಡ್ಡಿಗಳ ಕೈವಾಡವೂ ಇರಬಹುದು ಎಂಬ ಸಂಶಯವಿದೆ ಎಂದಿದ್ದಾರೆ.