ಮಹಾಭಾರತ ಕೃಷ್ಣನ, ಪಾಂಡವರ ಕತೆ ಮಾತ್ರವಲ್ಲ ನಮ್ಮ ನಿಮ್ಮೆಲ್ಲರ ಕತೆ. ಮನುಕುಲದ ಕತೆ ಎಂದು ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟಿದ್ದಾರೆ.
ಉಡುಪಿ ಶ್ರೀ ಮನ್ಮಧ್ವಸಿದ್ದಾಂತ ಪ್ರಬೋಧಿನಿ ಸಂಸ್ಕೃತ ಮಹಾ ಪಾಠ ಶಾಲೆ ಪ್ರಸ್ತುತಪಡಿಸಿದ 2010-11ನೇ ಸಾಲಿನ ಕಾವ್ಯಶಾಸ್ತ್ರ ವಿಚಾರ ಪರಿಷತ್ ಅನ್ನು ಉದ್ಘಾಟಿಸಿ ಶ್ರೀ ಮಧ್ವಾಚಾರ್ಯ ವಿರಚಿತ ಮಹಾಭಾರತ ತಾತ್ಪರ್ಯ ನಿರ್ಣಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಮಹಾಭಾರತದ ಬಗೆಗೆ ಇದ್ದ ಎಲ್ಲ ಸಂದೇಹಗಳಿಗೆ ತಾತ್ಪರ್ಯ ನಿರ್ಣಯ ಗ್ರಂಥದ ಮೂಲಕ ಮಧ್ವಾಚಾರ್ಯರು ಉತ್ತರ ನೀಡಿದ್ದಾರೆ. ವೇದವ್ಯಾಸರು ರಚಿಸಿದ ಮೂಲ ಮಹಾಭಾರತ ಯಾವುದು ಎಂದು ಕಂಡು ಹುಡುಕುವುದು ಕಷ್ಟವಾಗಿದೆ. ಅಷ್ಟೊಂದು ಅದಕ್ಕೆ ಸೇರ್ಪಡೆಗೊಂಡಿದೆ. ಮಧ್ವಾಚಾರ್ಯರು ಮೂಲ ಮಹಾಭಾರತದ ಬಗ್ಗೆ ಬರೆದು ಜಿಜ್ಞಾಸುಗಳಿಗೆ ಉಪಕಾರ ಮಾಡಿದ್ದಾರೆ ಎಂದರು.
ಮಹಾಭಾರತದಲ್ಲಿ ಬರುವ ಧರ್ಮರಾಯ ಧರ್ಮದ ಪ್ರತೀಕ. ಭೀಮ ದೈಹಿಕ ಬಲ ಮತ್ತು ಆತ್ಮಬಲದ ಪ್ರತೀಕ. ಅರ್ಜುನ ಸಾಧನೆಯ ಪ್ರತೀಕ. ನಕುಲ ಸಹದೇವರು ಶೀಲ ಮತ್ತು ವಿನಯದ ಪ್ರತೀಕ. ಈ ಎಲ್ಲ ಐದು ಗುಣಗಳಿದ್ದರೆ, ವಿದ್ಯೆಯ ಪ್ರತೀಕವಾದ ದ್ರೌಪದಿ ದೊರೆಯುತ್ತಾಳೆ. ಅರ್ಥಾತ್ ವಿದ್ಯೆ ದೊರೆಯುತ್ತದೆ ಎಂದರು.
ಪಾಂಡವರು ಧರ್ಮದ, ನೀತಿಯ, ಪುಣ್ಯದ ಪ್ರತೀಕವಾದರೆ, ಕೌರವರು ಅಧರ್ಮದ, ಅನೀತಿಯ, ಪಾಪದ ಪ್ರತೀಕ. ಒಳ್ಳೆಯದಕ್ಕಿಂತ ಕೆಟ್ಟ ವಿಚಾರಗಳೇ ಜಾಸ್ತಿ ಇರುತ್ತದೆ. ಪಾಂಡವರಿಗಿಂತ ಕೌರವರ ಸಂಖ್ಯೆ ಜಾಸ್ತಿ. ಆದರೆ ಕೆಟ್ಟ ವಿಚಾರಗಳ ಎದುರು ಒಳ್ಳೆಯ ವಿಚಾರಗಳೇ ಗೆಲ್ಲುತ್ತವೆ ಎಂಬುದು ಮಹಾಭಾರತದ ಸಾರ ಎಂದು ವಿವರಿಸಿದರು.