ಬಿಜೆಪಿ ಸರಕಾರ ತನ್ನ ಭ್ರಷ್ಟ ಸಚಿವರು ಹಾಗೂ ಶಾಸಕರ ರಕ್ಷಣೆ ಮಾಡಲು ಲೋಕಾಯುಕ್ತರಿಗೆ ಪರಮಾಧಿಕಾರ ನೀಡಲು ಹಿಂಜರಿಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.
ಗುಬ್ಬಿ ತಾಲೂಕಿನ ಕಡಬ ಹೋಬಳಿ ಗೊರಜಿಹಳ್ಳಿಯಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರವನ್ನಷ್ಟೇ ನೀಡಿ, ಮುಖ್ಯಮಂತ್ರಿಗಳು, ಶಾಸಕರು, ಸಚಿವರನ್ನು ಲೋಕಾಯುಕ್ತ ಅಧಿಕಾರ ವ್ಯಾಪ್ತಿಯಿಂದ ಹೊರಗಿಟ್ಟ ಕ್ರಮ ಯಡಿಯೂರಪ್ಪ ನೇತೃತ್ವದ ಸರ್ಕಾರ ಕೈಗೊಂಡಿರುವ ನಿರ್ಧಾರ ಸರಿಯಲ್ಲ ಎಂದರು.
ಭ್ರಷ್ಟರನ್ನು ಮಟ್ಟ ಹಾಕಲು ಸ್ಥಾಪಿಸಿರುವ ಲೋಕಾಯುಕ್ತ ಸಂಸ್ಥೆಗೆ ಹೆಚ್ಚಿನ ಅಧಿಕಾರ ಕೊಡಬೇಕು ಎಂಬ ಪ್ರಯತ್ನ ನನ್ನ ಸರಕಾರದಲ್ಲೂ ನಡೆದಿತ್ತು. ಆದರೆ ಅಧಿಕಾರದಿಂದ ನಿರ್ಗಮಿಸಿದ ಪರಿಣಾಮ ಸಾಧ್ಯವಾಗಲಿಲ್ಲ. ಪರಮಾಧಿಕಾರ ನೀಡುತ್ತೇವೆ ಎಂದು ಭರವಸೆ ನೀಡಿರುವ ಮುಖ್ಯಮಂತ್ರಿಗಳು ಇದೀಗ ಮತ್ತೆ ಲೋಕಾಯುಕ್ತಕ್ಕೆ ಅರ್ಧ ಅಧಿಕಾರವನ್ನಷ್ಟೇ ನೀಡಿ ವಂಚಿಸಿದ್ದಾರೆ ಎಂದು ದೂರಿದರು.
ರಾಜ್ಯ ಸರಕಾರದ ವೈಫಲ್ಯ ಹಾಗೂ ಅಕ್ರಮ ಗಣಿಗಾರಿಕೆ ಕುರಿತು ರಾಜ್ಯವ್ಯಾಪಿ ಜನಾಂದೋಲನ ರೂಪಿಸಲು ಶೀಘ್ರದಲ್ಲೇ ಜೆಡಿಎಸ್ ಮುಖಂಡರ ಸಭೆ ಕರೆಯುತ್ತಿರುವುದಾಗಿ ತಿಳಿಸಿದರು.