ರಾಜ್ಯದ ಸಂಪತ್ತು ಲೂಟಿ, ಅಕ್ರಮ ಗಣಿಗಾರಿಕೆ, ಹದಗೆಟ್ಟ ಕಾನೂನು ಸುವ್ಯವಸ್ಥೆ, ಆಡಳಿತ ಕುಸಿತ, ನಿಯಂತ್ರಣಕ್ಕೆ ಸಿಗದ ಸಚಿವರು, ಇಷ್ಟೆಲ್ಲಾ ಅವಾಂತರ ಸೃಷ್ಟಿಸಿರುವ ರಾಜ್ಯ ಬಿಜೆಪಿ ಸರ್ಕಾರವನ್ನು ವಜಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕೆಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಗುಡುಗಿದ್ದಾರೆ.
ಅಲ್ಲದೇ ಬಳ್ಳಾರಿ ಬಚಾವೋ ಆಂದೋಲನ ನಡೆಸುವುದಾಗಿ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಗಣಿಧಣಿಗಳಿಗೆ ಸವಾಲೆಸೆದಿದ್ದಾರೆ. ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಗಣಿ ಸಂಪತ್ತು ಅಕ್ರಮವಾಗಿ ಲೂಟಿಯಾಗುತ್ತಿದ್ದರು ಅಧಿಕಾರಿಗಳನ್ನು ನಿರ್ವೀರ್ಯರನ್ನಾಗಿ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಚಿವರ ವಿರುದ್ದ ಜಾಮೀನು ರಹಿತ ಬಂಧನದ ವಾರಂಟ್, ಮತ್ತೊಬ್ಬ ಸಚಿವರ ಮೇಲೆ 17 ಕ್ರಿಮಿನಲ್ ಕೇಸು ದಾಖಲಾಗಿದ್ದರೂ ಏನೂ ಮಾಡಲು ಸಾಧ್ಯವಾಗುತ್ತಿಲ್ಲ. ರಾಜ್ಯದಲ್ಲಿ ಕಾನೂನು ಇಲ್ಲದಂತಾಗಿದೆ. ಬೇಲೇಕೇರಿ, ಮಂಗಳೂರು, ಕಾರವಾರ ಬಂದರುಗಳಿಂದ ಅದಿರು ರಫ್ತು ಮಾಡುವುದನ್ನು ಸ್ಥಗಿತಗೊಳಿಸುವಂತೆ ಹೈಕೋರ್ಟ್ ಆದೇಶ ನೀಡಿದೆ. ಆದರೆ ಆಂಧ್ರ-ತಮಿಳುನಾಡು ಮೂಲಕ ನಕಲಿ ಪರವಾನಗಿ ಸೃಷ್ಟಿಸಿ ಅಕ್ರಮವಾಗಿ ಅದಿರು ರಫ್ತು ಮಾಡಲಾಗುತ್ತಿದೆ ಎಂದು ಗೌಡರು ದೂರಿದರು.
ಕೇಂದ್ರ ಸರ್ಕಾರ ಅಸಹಾಯಕವಾಗಿದೆಯೇ ಎಂದು ಪ್ರಶ್ನಿಸಿದ ಅವರು, ರಾಜ್ಯಾಂಗ ವಿಧಿ ಅನ್ವಯ 356ನೆ ಕಲಂ ಜಾರಿಗೊಳಿಸಿ ರಾಷ್ಟ್ರಪತಿ ಆಡಳಿತ ತಂದು ಈ ರಾಜ್ಯದ ಜನರನ್ನು ರಕ್ಷಿಸಿ ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಇಂತಹ ಪರಿಸ್ಥಿತಿ ಸೃಷ್ಟಿಯಾಗಿ ನಾನೇನಾದರೂ ಪ್ರಧಾನಿಯಾಗಿದ್ದರೆ ರಾಷ್ಟ್ರಪತಿ ಆಡಳಿತವನ್ನು ಮುಲಾಜಿಲ್ಲದೆ ಜಾರಿಗೊಳಿಸುತ್ತಿದ್ದೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಗಾದಿಗೆ ಈ ದೇಶದಲ್ಲಿ ಯಾರೂ ಗತಿಯಿಲ್ಲದೆ ಇಟಲಿಯಿಂದ ಆಮದು ಮಾಡಿಕೊಳ್ಳಲಾಗಿದೆ ಎಂದು ಜನಾರ್ದನ ರೆಡ್ಡಿ ಅವರು ಟೀಕೆ ಮಾಡಿದರೂ ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ ಇನ್ನೂ ಸಿಟ್ಟು ಬರುತ್ತಿಲ್ಲವೇ ಎಂದು ದೇವೇಗೌಡರು ಪ್ರಶ್ನಿಸಿದರು.