ವಿಧಾನಮಂಡಲದಲ್ಲಿ ವಿರೋಧ ಪಕ್ಷದವರು ಆರ್ಭಟಿಸುವಾಗ ನಾವು (ಬಿಜೆಪಿ) ಸುಮ್ಮನಿರಲು ಸಾಧ್ಯವೆ? ನಾವು ಗಂಡಸರೇ ಅಲ್ವಾ..ಹೀಗೆಂದು ಪ್ರತಿಕ್ರಿಯೆ ನೀಡಿದವರು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ.
ಶುಕ್ರವಾರ ವಿಧಾನಸಭೆಯಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷಗಳ ನಡುವೆ ನಡೆದ ಜಟಾಪಟಿ ಕುರಿತಂತೆ ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ಪ್ರತಿಕ್ರಿಯಿಸಿದರು.
ಸದನದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು, ಮುಖಂಡರು ಕುಸ್ತಿಪಟುಗಳ ತರಹ ಕೈ ತಟ್ಟಿ ತೋರಿಸುವುದು ಸರಿಯಲ್ಲ. ಬಿಜೆಪಿ ಎಂದಿಗೂ ಶಿಸ್ತಿನ ಪಕ್ಷ. ಶಿಸ್ತಿಗೆ ನಾವು ಹೆಚ್ಚಿನ ಮಹತ್ವ ನೀಡುತ್ತೇವೆ. ಹಾಗಂತ ವಿಪಕ್ಷದವರು ತೋಳೇರಿಸಿ ಬಂದಾಗ ನಾವು ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಬಿಜೆಪಿ ಶಾಸಕ, ಸಚಿವರ ವರ್ತನೆಯನ್ನು ಸಮರ್ಥಿಸಿಕೊಂಡರು.
ಸುಮಾರು ಐವತ್ತು ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಇಂತಹ ಸಂಸ್ಕೃತಿಯನ್ನು ಹುಟ್ಟುಹಾಕಿದೆ. ಸದನದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಮೊದಲು ವಿಪಕ್ಷಗಳು ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.