ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಜನರ ಮನವೊಲಿಕೆಗಾಗಿ ಧರಣಿ ಮಾಡಿದ ಅಧಿಕಾರಿ! (Chithradurga | CEO | Congress | Range gowda)
Bookmark and Share Feedback Print
 
ನಿರ್ಮಲ ಗ್ರಾಮ ಯೋಜನೆಯಡಿ ಸಹಾಯಧನ ಕೊಟ್ಟರೂ ಶೌಚಾಲಯ ನಿರ್ಮಾಣಕ್ಕೆ ಮುಂದಾಗದ ಜನತೆ. ಬೇಸತ್ತ ಸಿಇಒರಿಂದ ಅವರ ಮನೆ ಮುಂದೆ 'ಗಾಂಧಿಗಿರಿ'. ತಾಸುಗಟ್ಟಲೇ ಕೂತು ಚರ್ಚೆ, ಸಂವಾದ. ಅಂತೂ ಶೌಚಾಲಯ ನಿರ್ಮಾಣಕ್ಕೆ ಮನವೊಲಿಕೆ...ಇಂಥ ಅಪರೂಪದ ಪ್ರಸಂಗ ನಡೆದದ್ದು ನಗರ ಹೊರವಲಯದ ಮಠದ ಕುರುಬರಹಟ್ಟಿಯಲ್ಲಿ.

ಸೌಲಭ್ಯಕ್ಕಾಗಿ ನಾಗರಿಕರು ಧರಣಿ ನಡೆಸುವುದು ಸಹಜ. ನೀರಿಲ್ಲ, ಶೌಚಾಲಯವಿಲ್ಲ, ಸ್ವಚ್ಛತೆ ಇಲ್ಲ ಎಂಬ ದೂರುಗಳಿಗೂ ಬರವಿಲ್ಲ. ನೈರ್ಮಲ್ಯಕ್ಕೆ ಸಹಕರಿಸುವಂತೆ ಅಧಿಕಾರಿಯೇ ಜನರ ಮನೆ ಮುಂದೆ ಧರಣಿ ಕುಳಿತದ್ದು ವಿಶೇಷ.

ಜಿ.ಪಂ.ನಿಂದ ಸಂಪೂರ್ಣ ನೈರ್ಮಲ್ಯ ಆಂದೋಲನ ಆರಂಭಿಸಲಾಗಿದೆ. ನಿರ್ಮಲ ಗ್ರಾಮ ಯೋಜನೆಯಡಿ ಸಬ್ಸಿಡಿ ನೀಡಿ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಮನವೊಲಿಸುವುದು ಇದರ ಉದ್ದೇಶ. ಮಠದ ಕುರುಬರಹಟ್ಟಿಯಲ್ಲಿ ಆಂದೋಲನ ಆರಂಭಿಸಿದ್ದರೂ ಕೆಲವರು ಆಸಕ್ತಿ ತೋರಲಿಲ್ಲ. ಇದರಲ್ಲಿ ಪದವಿ ಪಡೆದವರೂ ಇದ್ದು, ಒಣ ಪ್ರತಿಷ್ಠೆ ಪ್ರದರ್ಶಿಸುತ್ತಿದ್ದರು.

ಇದರಿಂದ ಸಿಇಒ ರಂಗೇಗೌಡ ಶನಿವಾರ ಬೆಳಗ್ಗೆ 6 ಗಂಟೆಗೆ ಹಳ್ಳಿಗೆ ತೆರಳಿದರು. ಶೌಚಾಲಯ ನಿರ್ಮಿಸಿಕೊಳ್ಳಲು ಒಲ್ಲೆ ಎಂದವರ ಮನವೊಲಿಸಲು ಯತ್ನಿಸಿದರು. ಸ್ಪಂದಿಸದಿದ್ದಾಗ ಮನೆ ಎದುರೇ ಪೇಪರ್ ಓದುತ್ತ, ಅವರಿಗೆ ಶೌಚಾಲಯ ಅಗತ್ಯದ ಬಗ್ಗೆ ಮನವರಿಕೆ ಮಾಡಿಕೊಡುತ್ತ ಧರಣಿ ಕುಳಿತರು.

ರಸ್ತೆಯಿಲ್ಲ, ಚರಂಡಿಯಿಲ್ಲ... ಎಂಬ ಕೊರತೆಗಳ ಪಟ್ಟಿಯನ್ನೇ ಈ ನಡುವೆ ಜನ ಬಿಚ್ಚಿದರು. ಮೂಲ ಸೌಲಭ್ಯ ಒದಗಿಸಿದ ನಂತರವೇ ಶೌಚಾಲಯ ಎಂದು ಹೇಳಿದರು. ಅದಕ್ಕೂ ಇದಕ್ಕೂ ಸಂಬಂಧವಿಲ್ಲ. ನಿಮ್ಮ ಬೇಡಿಕೆಯಂತೆ ರಸ್ತೆ ದುರಸ್ತಿ ಮಾಡಿಸಲಾಗುವುದು. ಅದಕ್ಕೂ ಮುನ್ನ ನೀವು ಶೌಚಾಲಯ ನಿರ್ಮಿಸಿಕೊಳ್ಳಲೇಬೇಕು ಎಂದು ಸಿಇಒ ಹಠಕ್ಕೆ ಬಿದ್ದರು. ದಾರಿಕಾಣದೇ ಜನರು ಶೌಚಾಲಯ ನಿರ್ಮಾಣಕ್ಕೆ ಜೈ ಹೋ ಎಂದರು. ತಕ್ಷಣವೇ ಕಾಮಗಾರಿ ಆರಂಭವಾಗುವ ಮೂಲಕ ಸಿಇಒ ಧರಣಿ ಅಂತ್ಯ ಕಂಡಿತು.
ಸಂಬಂಧಿತ ಮಾಹಿತಿ ಹುಡುಕಿ