ರಾಜ್ಯದ 20 ಹಿಂದುಳಿದ ಜಿಲ್ಲೆಗಳಲ್ಲಿ ಮಾದರಿ ಪದವಿ ಕಾಲೇಜು ತೆರೆಯಲು ನಿರ್ಧರಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಪ್ರತಿ ಕಾಲೇಜಿಗೆ ಕೇಂದ್ರ ಸರಕಾರ ಮೂರು ಕೋಟಿ ರೂ. ಹಾಗೂ ರಾಜ್ಯ ಸರಕಾರ ಎರಡು ಕೋಟಿ ರೂ. ನೀಡಲಿದೆ. ಇದರಿಂದ ಹಿಂದುಳಿದ ಜಿಲ್ಲೆಗಳಲ್ಲಿ ಶಿಕ್ಷಣದ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದರು.
ಜು. 14 ರಿಂದ ರಾಜ್ಯಾದ್ಯಂತ ಸಿಇಟಿ ಕೌನ್ಸೆಲಿಂಗ್ ಆರಂಭವಾಗಲಿದೆ. ಈ ಬಾರಿ 40 ಸಾವಿರ ಸೀಟುಗಳಿವೆ. ಮೊದಲ ಹಂತದಲ್ಲಿ ಸೀಟುಗಳ ಬಗ್ಗೆ ಪೂರ್ಣ ಮಾಹಿತಿ ನೀಡಿದ 148 ಕಾಲೇಜುಗಳನ್ನು ಕೌನ್ಸೆಲಿಂಗ್‌ಗೆ ಪರಿಗಣಿಸಲಾಗುವುದು. 37 ಕಾಲೇಜುಗಳು ಭಾಗಶಃ ಮಾಹಿತಿ ನೀಡಿದ್ದು, ಕಳೆದ ವರ್ಷದ ಸೀಟುಗಳನ್ನು ಅಲ್ಲಿ ಪರಿಗಣಿಸಲಾಗುತ್ತದೆ. ಎರಡು ಡೀಮ್ಡ್ ವಿವಿಗಳ ಕಾಲೇಜು ಮತ್ತು ಸಿಇಟಿಗೆ ಅನುಮತಿ ಪಡೆದ ಏಳು ಹೊಸ ಕಾಲೇಜುಗಳನ್ನು ನಂತರ ಪರಿಗಣಿಸಲಾಗುತ್ತದೆ ಎಂದು ಹೇಳಿದರು.
ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಶೇ.15ರಷ್ಟು ಸಮಾನಾಂತರ (ಲ್ಯಾಟರಲ್ ಎಂಟ್ರಿ) ಪ್ರವೇಶಕ್ಕೆ ಕೇಂದ್ರ ಸರಕಾರವನ್ನು ಕೋರಲಾಗಿದೆ ಎಂದು ಲಿಂಬಾವಳಿ ತಿಳಿಸಿದರು.