ವಿಧಾನಸಭೆಯಲ್ಲಿ ಶುಕ್ರವಾರ ನಡೆದ ಅಹಿತಕರ ಘಟನೆಗೆ ಆಡಳಿತ ಮತ್ತು ಪ್ರತಿಪಕ್ಷ ನಾಯಕರು ಸೇರಿದಂತೆ ಎಲ್ಲರೂ ಕಾರಣರಾಗಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಜಗದೀಶ ಶೆಟ್ಟರ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ನಗರದ ಗೋಕುಲ ರಸ್ತೆ ಅಕ್ಷಯ ಪಾರ್ಕ್‌ನಲ್ಲಿ ಹುಬ್ಬಳ್ಳಿ-ಧಾರವಾಡ ಒನ್ ಸಮಗ್ರ ನಾಗರಿಕ ಸೇವಾ ಕೇಂದ್ರ ಉದ್ಘಾಟಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಅಧಿವೇಶನ ನಡೆಯುವಾಗ ಪ್ರತಿಯೊಬ್ಬ ಶಾಸಕರು ಹಾಗೂ ಸಚಿವರು ಶಿಸ್ತು-ಸಂಯಮ ಪಾಲಿಸಬೇಕು. ಒಂದು ವೇಳೆ ಸದನದಲ್ಲಿ ಅಶಿಸ್ತಿನಿಂದ ವರ್ತಿಸಿದರೆ ಜನಪ್ರತಿನಿಧಿಗಳ ಮೇಲೆ ಜನತೆ ಇಟ್ಟಿರುವ ವಿಶ್ವಾಸಕ್ಕೆ ಚ್ಯುತಿ ಉಂಟಾಗುವುದರಲ್ಲಿ ಸಂದೇಹ ಇಲ್ಲ ಎಂದರು.
ವಿಧಾನಸಭಾಧ್ಯಕ್ಷರ ಚುನಾವಣೆ ನಡೆಯುವಾಗ ಕೂಡ ಸದನದಲ್ಲಿ ಸಾಕಷ್ಟು ಗದ್ದಲ ನಡೆದಿತ್ತು. ಅಂತಹ ಪ್ರಕರಣ ಈಗ ಮತ್ತೆ ಮರುಕಳಿಸಿದೆ. ಇದರಿಂದ ಸದನಕ್ಕೆ ಅಗೌರವ ತೋರಿದಂತಾಗುತ್ತದೆ. ಶಿಸ್ತು ಉಲ್ಲಂಘಿಸುವುದು ಆಡಳಿತ ಮತ್ತು ಪ್ರತಿಪಕ್ಷ ನಾಯಕರಿಗೆ ಶೋಭೆ ತರುವುದಿಲ್ಲ ಎಂದರು.