ವಿಧಾನಸಭೆಯಲ್ಲಿ ತಮಗೆ ಜೀವಬೆದರಿಕೆ ಇದೆ ಎಂದು ಜೆಡಿಎಲ್‌ಪಿ ನಾಯಕ ಎಚ್.ಡಿ.ರೇವಣ್ಣ ಸೇರಿದಂತೆ ಪಕ್ಷದ ಶಾಸಕರು ಹೆಲ್ಮೆಟ್ ಧರಿಸಿ ವಿಧಾನಮಂಡಲ ಕಲಾಪಕ್ಕೆ ಆಗಮಿಸಿದ ಘಟನೆ ಸೋಮವಾರ ನಡೆಯಿತು.
ವಿಧಾನಸಭೆಯ ಹೊರಗೆ ನಮಗೆ ಜನರ ರಕ್ಷಣೆ ಇದೆ. ಆದರೆ ವಿಧಾನಸಭೆ ಒಳಗೆ ನಮಗೆ ರಕ್ಷಣೆ ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಆ ನಿಟ್ಟಿನಲ್ಲಿ ನಮಗೆ ಬುಲೆಟ್ ಪ್ರೂಫ್ ಜಾಕೆಟ್ ಕೊಡಿಸುವಂತೆ ಸಭಾಧ್ಯಕ್ಷರಿಗೆ ಮನವಿ ಮಾಡುವುದಾಗಿ ರೇವಣ್ಣ ಅವರು ಕಲಾಪಕ್ಕೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ಸದನದಲ್ಲಿ ಬಾಂಬ್, ಕಲ್ಲೆಸುವ ಭೀತಿ ಇರುವುದರಿಂದ ಹೆಲ್ಮೆಟ್ ಧರಿಸಿ ಹೋಗುತ್ತಿರುವುದಾಗಿ ತಿಳಿಸಿದ ಅವರು, ವಿಧಾನಸಭೆಯಲ್ಲೇ ನಮಗೆ ಜೀವ ಬೆದರಿಕೆ ಇದೆ. ಸದನದ ಕಲಾಪದಲ್ಲಿ ಭಾಗವಹಿಸಲು ಆತಂಕವಾಗುತ್ತಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಇಂದು ಕಲಾಪ ಆರಂಭವಾಗುತ್ತಿದ್ದಂತೆಯೇ ಜೆಡಿಎಸ್ ಶಾಸಕರು ತಲೆಗೆ ಹಳದಿ ಬಣ್ಣದ ಹೆಲ್ಮೆಟ್ ಧರಿಸಿ ಒಬ್ಬೊಬ್ಬರಾಗಿಯೇ ಒಳಬರುತ್ತಿರುವ ದೃಶ್ಯವನ್ನು ಉಳಿದ ಸದಸ್ಯರು ಅಚ್ಚರಿಯಿಂದ ಗಮನಿಸಿದರು.
ಕಲಾಪದಲ್ಲಿ ಹೆಲ್ಮೆಟ್ ಧರಿಸಿ ಬಂದ ಜೆಡಿಎಸ್ ಶಾಸಕರಿಗೆ ಹೆಲ್ಮೆಟ್ ತೆಗೆಯುವಂತೆ ಸ್ಪೀಕರ್ ಬೋಪಯ್ಯ ಅವರು ಮನವಿ ಮಾಡಿಕೊಂಡರು. ಆದರೆ ಶುಕ್ರವಾರ ನಡೆದ ಘಟನೆ ಕುರಿತಂತೆ ವಿಪಕ್ಷಗಳು ಮತ್ತೆ ಧರಣಿ ಮುಂದುವರಿಸಿದ್ದರಿಂದ ಸಭಾಧ್ಯಕ್ಷರು ಕಲಾಪವನ್ನು ಅರ್ಧ ಗಂಟೆಗಳ ಕಾಲ ಮುಂದೂಡಿದರು.
ನಂತರ ಕಲಾಪ ಆರಂಭಗೊಂಡಾಗಲೂ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಶಾಸಕರ ಜಟಾಪಟಿ ಪ್ರಕರಣ ಕುರಿತಂತೆ ಅಶ್ಲೀಲವಾಗಿ ಮಾತನಾಡಿದ ಬಿಜೆಪಿ ಶಾಸಕರನ್ನು ಅಮಾನತು ಮಾಡಬೇಕೆಂದು ಪಟ್ಟು ಹಿಡಿದಾಗ ಸಭಾಧ್ಯಕ್ಷ ಬೋಪಯ್ಯ ಕಲಾಪವನ್ನು ಮತ್ತೆ ಸಂಜೆ 4 ಗಂಟೆಗೆ ಮುಂದೂಡಿದರು.