ಕರ್ನಾಟಕದಲ್ಲಿ ಮರಾಠಿಗರ ಮೇಲಿನ ದಾಳಿ ಮುಂದುವರಿದಲ್ಲಿ ಮಹಾರಾಷ್ಟ್ರದಲ್ಲಿನ ಕನ್ನಡಿಗರನ್ನು ಅಟ್ಟಾಡಿಸಿಕೊಂಡು ಶಿವಸೈನಿಕರು ಹೊಡೆಯುತ್ತಾರೆ ಎಂಬ ಬಾಳಾ ಠಾಕ್ರೆ ಹೇಳಿಕೆಯನ್ನು ಖಂಡಿಸಿರುವ ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್, ಕನ್ನಡಿಗರನ್ನು ಮುಟ್ಟಿದರೆ ಜಾಗ್ರತೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇಂದು ಬೆಂಗಳೂರಿನಲ್ಲಿ ಮಹಾರಾಷ್ಟ್ರ ಮತ್ತು ಶಿವಸೇನಾ ವರಿಷ್ಠ ಬಾಳಾ ಠಾಕ್ರೆ ಪ್ರತಿಕೃತಿ ದಹಿಸಿದ ನಂತರ ಮಾತನಾಡುತ್ತಿದ್ದ ಅವರು, ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ದಾಳಿ ನಡೆಸಿದರೆ ನಾವು ಇಲ್ಲಿ ಸುಮ್ಮನೆ ಕುಳಿತಿರಲಾರೆವು ಎಂದರು.
ಮಹಾರಾಷ್ಟ್ರ ಮತ್ತು ಮುಂಬೈಗಳಲ್ಲಿರುವ ಕನ್ನಡಿಗರನ್ನು ಓಡಿಸುತ್ತೇವೆ, ಉಡುಪಿ ಹೊಟೇಲುಗಳನ್ನು ಪುಡಿಗೈಯುತ್ತೇವೆ ಎಂದು ಠಾಕ್ರೆ ಎಚ್ಚರಿಕೆ ನೀಡಿದ್ದಾರೆ. ಎಲ್ಲಾದರೂ ಕನ್ನಡಿಗರಿಗೆ ಅನ್ಯಾಯ ಆದಲ್ಲಿ, ಉಡುಪಿ ಹೊಟೇಲುಗಳಿಗೆ ಧಕ್ಕೆಯಾದಲ್ಲಿ ನಾವು ಅದೇ ಹಾದಿ ತುಳಿಯಬೇಕಾಗುತ್ತದೆ. ಇದನ್ನು ಠಾಕ್ರೆ ಮರೆಯದಿರಲಿ ಎಂದು ವಾಟಾಳ್ ಎಚ್ಚರಿಸಿದರು.
ಮಹಾರಾಷ್ಟ್ರದ ತಿಕ್ಕಲುತನದ ವಿರುದ್ಧ ನಾವು ರಾಜ್ಯದಾದ್ಯಂತ ಹೋರಾಟ ಮಾಡುತ್ತೇವೆ. ನಮ್ಮ ಹೋರಾಟ ಶಿವಸೇನೆ ವಿರುದ್ಧ, ಎಂಇಎಸ್ ವಿರುದ್ಧ ಮತ್ತು ಬಾಳಾ ಠಾಕ್ರೆ ವಿರುದ್ಧ. ಕನ್ನಡಿಗರನ್ನು ಮುಟ್ಟಿದರೆ ಕರ್ನಾಟಕ, ಮಹಾರಾಷ್ಟ್ರ ಬಂದ್ ಮಾಡುತ್ತೇವೆ. ಮಹಾರಾಷ್ಟ್ರದ ಗಡಿಯನ್ನೇ ಬಂದ್ ಮಾಡುತ್ತೇವೆ. ಯಾವುದೇ ರೀತಿಯ ಅನ್ಯಾಯವನ್ನು ನಾವು ಸಹಿಸುವುದಿಲ್ಲ ಎಂದು ತಮಟೆ ಬಡಿದು ಸ್ಪಷ್ಟಪಡಿಸಿದರು.
ಅದೇ ಹೊತ್ತಿಗೆ ವಾಟಾಳ್, ರಾಜ್ಯ ಸರಕಾರದ ವಿರುದ್ಧವೂ ಹರಿ ಹಾಯ್ದಿದ್ದಾರೆ. ಬೆಳಗಾವಿ ಗಡಿ ವಿವಾದ ಭುಗಿಲೆದ್ದಿದ್ದರೂ ಅದು ಶಾಸನ ಸಭೆಯಲ್ಲಿ ಚರ್ಚೆಯಾಗುತ್ತಿಲ್ಲ. ಹೊಗೇನಕಲ್, ಬೆಳಗಾವಿ ಕುರಿತು ಚರ್ಚೆ ನಡೆಯಬೇಕಿತ್ತು. ಸರಕಾರಕ್ಕೆ ಏನಾಗಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ವಿಧಾನಸಭೆಗೆ ಏನಾಗಿದೆ? ವಿಧಾನ ಪರಿಷತ್ತಿಗೆ ಏನಾಗಿದೆ? ಆಡಳಿತ ಪಕ್ಷ ಬಿಜೆಪಿಗೆ ಏನಾಗಿದೆ? ವಿರೋಧ ಪಕ್ಷ ಏನು ಮಾಡುತ್ತಿದೆ ಎಂದು ಇಡೀ ರಾಜಕೀಯ ವ್ಯವಸ್ಥೆಯನ್ನೇ ತರಾಟೆಗೆ ತೆಗೆದುಕೊಂಡಿರುವ ವಾಟಾಳ್, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಒತ್ತಾಯಿಸಿದರು.
ಯಡಿಯೂರಪ್ಪ ಸರಕಾರ ರಾಜ್ಯವನ್ನೇ ಹಾಳು ಮಾಡುತ್ತಿದೆ. ಅದು ಕನ್ನಡ ವಿರೋಧಿ ನೀತಿಯನ್ನು ಅನುಸುರಿಸುತ್ತಿದೆ. ಬೆಳಗಾವಿಗೆ ಬಂದ ಮಹಾರಾಷ್ಟ್ರದ ನಾಯಕರನ್ನು ಸರಕಾರ ಬಂಧಿಸಿಲ್ಲ. ರಾಜ್ಯ ವಿರೋಧಿ ಎಂಇಎಸ್ ಸೊಕ್ಕು ಮುರಿಯುವ ಕೆಲಸಕ್ಕೂ ಅದು ಮುಂದಾಗುತ್ತಿಲ್ಲ ಎಂದೆಲ್ಲಾ ಟೀಕಾ ಪ್ರಹಾರ ನಡೆಸಿದ್ದಾರೆ.