ರಾಜ್ಯಪತ್ರ 89ರ ಅಡಿಯಲ್ಲಿ ಸಾದರ ಸಮುದಾಯಕ್ಕೆ ಸರಕಾರ ನೀಡಿರುವ ಪ್ರವರ್ಗ 2ಎ ಸವಲತ್ತು ಪಡೆಯಲು ಯಾರಾದರೂ ಅಡ್ಡಿಪಡಿಸಿದರೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಅಖಿಲ ಭಾರತ ಸಾದರ ಸಮಾಜದ ಮುಖಂಡ ಹಾಗೂ ಮಾಜಿ ಶಾಸಕ ಬಿ.ಜೆ.ಕೊಟ್ರಪ್ಪ ಎಚ್ಚರಿಸಿದರು.
ಹಿಂದುಳಿದವರ ಹೆಸರಿನಲ್ಲಿ ಒಕ್ಕೂಟ ಮಾಡಿಕೊಂಡಿರುವ ಕೆಲವರು, ಶೋಷಿತರ ದಾರಿ ತಪ್ಪಿಸುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ರಾಜ್ಯ ಸರಕಾರ 1994ರಲ್ಲಿಯೇ ಸಾದರ ಸಮುದಾಯಕ್ಕೆ ಪ್ರವರ್ಗ 2ಎ ಸವಲತ್ತು ನೀಡಿದೆ. 2002ರಲ್ಲಿ ರಾಜ್ಯ ಸರಕಾರ ರಾಜ್ಯಪತ್ರದಲ್ಲಿ ಇದನ್ನು ಅಧಿಕೃತವಾಗಿ ಪ್ರಕಟಿಸಿದೆ. ಬಿಜೆಪಿ ಸರಕಾರ ಈ ಸವಲತ್ತು ನೀಡಿದೆ ಎಂದು ಕೆಲವರು ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಾದರ ಸಮುದಾಯದವರಿಗೆ ಪ್ರವರ್ಗ 2ಎ ಜಾತಿ ಪ್ರಮಾಣಪತ್ರ ನೀಡಬಾರದೆಂದು ಕುರುಬ ಸಮುದಾಯದ ಕೆಲ ಮುಖಂಡರು ಒತ್ತಾಯಿಸುತ್ತಿದ್ದಾರೆ. ಇದೇ ಸಮುದಾಯದ 500ಕ್ಕೂ ಹೆಚ್ಚು ಅಧಿಕಾರಿಗಳು ಕಾಡುಕುರುಬರೆಂದು ಸುಳ್ಳು ಜಾತಿ ಪ್ರಮಾಣಪತ್ರ ಪಡೆದು ಶೋಷಿತರಿಗೆ ಅನ್ಯಾಯ ಮಾಡಿದ್ದಾರೆ. ಇವರ ಮೇಲೆ ಕ್ರಮ ಕೈಗೊಳ್ಳುವಂತೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಸರಕಾರಕ್ಕೆ ಶಿಫಾರಸು ಮಾಡಿದೆ. ಈ ಬಗ್ಗೆ ಯಾಕೆ ವಿರೋಧಿಸುತ್ತಿಲ್ಲ ಎಂದು ಪ್ರಶ್ನಿಸಿದರು.