ತಮ್ಮನ್ನು ರಾಜಕೀಯವಾಗಿ ಮುಗಿಸಲು ಪ್ರಯತ್ನಿಸಿದವರೇ ರಾಜಕೀಯವಾಗಿ ನಾಶ ಹೊಂದುವುದು ಖಚಿತ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಹೇಳಿದ್ದಾರೆ.
ಸ್ವಗ್ರಾಮ ಹರತಾಳು ರಾಘವೇಂದ್ರ ಮಠದಲ್ಲಿ ಪೂಜೆ ಸಲ್ಲಿಸಿ ನಂತರ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ದೇವಾಲಯ, ನ್ಯಾಯಾಲಯ ಮತ್ತು ಜನತಾ ನ್ಯಾಯದ ಮುಂದೆ ಶರಣಾಗಿದ್ದೇನೆ. ಅಪರಾಧ ಮಾಡದಿರುವುದರಿಂದ ಯಾವುದೇ ಭಯವಿಲ್ಲ. ಸೊರಬ ಕ್ಷೇತ್ರ ತಪ್ಪಿ ಹೋಗುತ್ತಿರುವುದನ್ನು ಸಹಿಸಲಾಗದ ಮಾಜಿ ಮುಖ್ಯಮಂತ್ರಿ, ಮತ್ತವರ ಕುಟುಂಬ ಮತ್ತು ಪಕ್ಷದ ಕೆಲ ಹಿತ ಶತ್ರುಗಳು ಸೇರಿ ಪಿತೂರಿ ನಡೆಸಿರುವುದು ಈ ಸ್ಥಿತಿಗೆ ಕಾರಣ.
ಅಧಿಕಾರಕ್ಕೆ ಅಂಟಿಕೊಂಡಿಲ್ಲವಾದ್ದರಿಂದ ಮಂತ್ರಿ ಪದವಿ ಹೋಗಿರುವುದಕ್ಕೆ ಬೇಸರವಿಲ್ಲ. ಜನರ ಅಭಿಮಾನದ ಮುಂದೆ ಎಲ್ಲವೂ ಶೂನ್ಯ. ಸಾಗರ -ಸೊರಬ ಮತ್ತು ಹೊಸನಗರ ಕ್ಷೇತ್ರದ ದೇವಾಲಯಗಳಿಗೆ ಭೇಟಿ ನೀಡಿದ ಸಂದರ್ಭ, ಜನ ಸಾಮಾನ್ಯರು ನೀಡಿದ ಅದ್ದೂರಿ ಸ್ವಾಗತ ಮತ್ತು ಪ್ರೀತಿ ಆನಂದ ಉಂಟು ಮಾಡಿದೆ. ಅನ್ಯಾಯ ಎಸಗಿರುವವರಿಗೆ ದೇವರೇ ಶಿಕ್ಷೆ ನೀಡುತ್ತಾನೆಂದರು.
ಸೊರಬದ 39 ಗ್ರಾಮ ಪಂಚಾಯಿತಿಯಲ್ಲಿ 23 ಪಂಚಾಯಿತಿ ಅಧಿಕಾರ ಬಿಜೆಪಿ ಬೆಂಬಲಿತರ ಪಾಲಾಗಿದೆ. ಇದನ್ನು ತಿಳಿಯದ ಪ್ರತಿ ಪಕ್ಷದವರು 31 ಪಂಚಾಯಿತಿ ಕಾಂಗ್ರೆಸ್ ಹಿಡಿತದಲ್ಲಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಇದು ಸತ್ಯವಾದರೆ ರಾಜಕೀಯ ಸನ್ಯಾಸ ಸ್ವೀಕರಿಸುವುದಾಗಿ ಸವಾಲೆಸೆದರು.