ಸಾಗರ - ಹೊಸನಗರ ಕ್ಷೇತ್ರಗಳಲ್ಲಿ ಅದ್ಧೂರಿ ಸ್ವಾಗತ ಮೆರವಣಿಗೆ ಮಾಡಲು ಹರತಾಳು ಹಾಲಪ್ಪ ಯಾವುದೇ ವರ್ಲ್ಡ್ ಕಪ್ ಗೆದ್ದು ಬಂದಿಲ್ಲ. ಆ ಪ್ರಕರಣವೇ ವರ್ಲ್ಡ್ ಕಪ್ ಎಂದು ತಿಳಿದುಕೊಂಡಿದ್ದಾರೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಲೇವಡಿ ಮಾಡಿದ್ದಾರೆ.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮತ್ತೆ ಮತ್ತೆ ಹೀಗೆಯೇ ಗೆಲ್ಲುವಂತೆ ಸಿಗಂದೂರು ಅಮ್ಮ ಆಶೀರ್ವದಿಸಲಿ. ಸಾಗರ ಕ್ಷೇತ್ರ ಈ ಪ್ರಕರಣದಲ್ಲಿ ತಾವು ನಿರಾಪರಾದಿ ಎಂದು ತಮ್ಮ ಕುಟುಂಬಕ್ಕೆ ನಂಬಿಕೆ ಹುಟ್ಟಿಸುವ ಅನಿವಾರ್ಯಕ್ಕೆ ಬಿದ್ದಿರುವ ಹಾಲಪ್ಪ, ಬೇರೆ ವ್ಯಕ್ತಿಗಳ ಮೇಲೆ ಸುಳ್ಳು ಆರೋಪ ಹೊರಿಸುತ್ತಿರುವುದು ಶುದ್ಧ ನಾಟಕ. ತಮಗೂ ಹಾಲಪ್ಪನವರ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಆದರೂ ತಮ್ಮ ಬಗ್ಗೆ ಆರೋಪಿಸುತ್ತಿರುವುದು ಬೇಸರ ತರಿಸಿದೆ. ಇವರ ಮೆರವಣಿಗೆ ಪೊಳ್ಳು ಎಲ್ಲವೂ ಜನರ ಬೆಂಬಲವಿದೆ ಎನ್ನುವುದನ್ನು ತೋರಿಸಿ ಸಾಚಾ ಎನಿಸಿಕೊಳ್ಳುವ ಪ್ರಯತ್ನ. ಅಷ್ಟೆ ಅಲ್ಲ ಬೇಳೂರು ಗೋಪಾಲಕೃಷ್ಣ ಮಂತ್ರಿಯಾಗುವುದನ್ನು ತಡೆಯುವ ಪಿತೂರಿ ಕೂಡ ಅಡಗಿದೆ ಎಂದು ದೂರಿದರು.
ದೇವಾಲಯಗಳಿಗೆ ಹೋಗಿ ಪೂಜೆ ಮಾಡಿಸುವುದನ್ನು ಬಿಟ್ಟು ಪ್ರಮಾಣ ಮತ್ತಿತರ ಕತೆ ಹೇಳುತ್ತ ಆರೋಪಿಸುವ ಹರತಾಳು ಹಾಲಪ್ಪ, ಧೈರ್ಯವಿದ್ದರೆ ಘಂಟೆ ಹೊಡೆದು ಪ್ರಮಾಣ ಮಾಡಲಿ. ತಾವೂ ಘಂಟೆ ಹೊಡೆದು ಪ್ರಮಾಣ ಮಾಡಲು ಸಿದ್ಧ ಎಂದು ಸವಾಲು ಹಾಕಿದರು.
ಸಿಗಂದೂರಿಗೆ ನಾನು ಹೋಗಿ ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೆಂದು ಹರಕೆ ಕಟ್ಟುತ್ತೇನೆ. ಪತ್ರ ಬರೆದು ಪ್ರಮಾಣ ಮಾಡುತ್ತೇನೆ ಎಂದರು. ಜಾತಿ ಬಾಂಧವರಾದ ವೆಂಕಟೇಶಮೂರ್ತಿ ನನ್ನೊಂದಿಗೆ ಮಾತನಾಡಿರುವುದೇ ಅಪರಾಧ ಎನ್ನುವುದಾದರೆ ಅದಕ್ಕೂ ಮಿಕ್ಕಿ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕಲ್ಲವೆ ಎಂದು ಪ್ರಶ್ನಿಸಿದರು.