ಅಕ್ರಮ ಗಣಿಗಾರಿಕೆ ನಡೆದೇ ಇಲ್ಲ, ಈ ಕುರಿತ ತನಿಖೆಯನ್ನು ಸಿಬಿಐಗೆ ವಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಸ್ಪಷ್ಟಪಡಿಸಿದ ಮೇಲೆ ಪ್ರತಿಪಕ್ಷಗಳು ಸುಮ್ಮನಿರಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಸಲಹೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡುತ್ತಿದ್ದ ಅವರು, ನಾವೇನೂ ಹುಟ್ಟಿದಾಗಲೇ ಗಣಿ ಮಾಲಕರಾಗಿರಲಿಲ್ಲ. ಎಲ್ಲವೂ ಭಗವಂತನ, ಜನರ ಆಶೀರ್ವಾದ. ಅವರ ಕಾರಣದಿಂದ ಶ್ರೀಮಂತಿಕೆ ನಮಗೆ ಒಲಿದು ಬಂದಿದೆ. ಆದರೆ ನಮ್ಮ ರಾಜಕೀಯ ಬೆಳವಣಿಗೆಯನ್ನು ಸಹಿಸದ ಪ್ರತಿಪಕ್ಷಗಳು ಕುತಂತ್ರ ಮಾಡುತ್ತಿವೆ ಎಂದು ಆರೋಪಿಸಿದರು.
ನೇರವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿಗಿಳಿದ ಸಚಿವರು, ರಾಜ್ಯದ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್‌ನಲ್ಲೇ ಸಾಕಷ್ಟು ಜನ ಗಣಿಗಾರಿಕೆ ನಡೆಸುತ್ತಿದ್ದಾರೆ. ಆದರೆ ಬಿಜೆಪಿಯಲ್ಲಿ ಗಣಿಗಾರಿಕೆ ನಡೆಸುತ್ತಿರುವುದು ಜನಾರ್ದನ ರೆಡ್ಡಿ ಮಾತ್ರ. ಆದರೂ ಅವರನ್ನೇ ಟಾರ್ಗೆಟ್ ಮಾಡಲಾಗುತ್ತಿದೆ. ಕಾಂಗ್ರೆಸ್ಸಿಗರಿಗೆ ಗಣಿಗಾರಿಕೆಯ ಕುರಿತು ಪ್ರಶ್ನಿಸುವ ನೈತಿಕ ಹಕ್ಕಿಲ್ಲ ಎಂದರು.
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ವಿರುದ್ಧವೂ ಶ್ರೀರಾಮುಲು ಕಿಡಿ ಕಾರಿದ್ದಾರೆ. ಅವರಿಗೆ ನೆರೆ ಸಂತ್ರಸ್ತರ, ಬಡವರ ಅಥವಾ ಪ್ರಮುಖ ವಿಧೇಯಕಗಳ ಕುರಿತು ಚರ್ಚೆ ನಡೆಯುವುದು ಬೇಕಿಲ್ಲ. ಚರ್ಚೆಗೆ ಯಾವುದೇ ವಿಷಯ ಇಲ್ಲ ಎಂದ ಕೂಡಲೇ ಗಣಿಗಾರಿಕೆ ವಿಚಾರವನ್ನು ಗಬ್ಬೆಬ್ಬಿಸಲಾಗುತ್ತಿದೆ ಎಂದಿದ್ದಾರೆ.
ನಮ್ಮದು ಅಕ್ರಮ ಗಣಿಗಾರಿಕೆಯಲ್ಲ.. ನಾವು ಅಕ್ರಮ ಗಣಿಗಾರಿಕೆ ನಡೆಸುತ್ತಿಲ್ಲ. ನಮಗೂ ಸ್ವಾಭಿಮಾನ ಇದೆ. ಅಕ್ರಮ ಗಣಿಗಾರಿಕೆ ಕುರಿತು ಆರೋಪಗಳ ಮೇಲೆ ಆರೋಪಗಳನ್ನು ಮಾಡುತ್ತಿರುವ ಸಿದ್ದರಾಮಯ್ಯ ಅಥವಾ ಯಾರೇ ಆಗಲಿ ಒಂದೇ ಒಂದು ದಾಖಲೆಗಳನ್ನು ನೀಡಲಿ. ತಕ್ಷಣವೇ ನಾವು ರಾಜೀನಾಮೆ ನೀಡಿ ಸರಕಾರದಿಂದ ಬೇರ್ಪಡುತ್ತೇವೆ ಎಂದು ಸವಾಲು ಹಾಕಿದರು.
ಬೇಲೇಕೇರಿ ಅದಿರು ಕಳ್ಳ ಸಾಗಾಟದಲ್ಲಿ ನಿಮ್ಮ ಹೆಸರು ಕೇಳಿ ಬರುತ್ತಿದೆಯಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೀರಾಮುಲು, ಇದು ಕಾಂಗ್ರೆಸ್ ಸಂಸ್ಕೃತಿ. ಅವರಿಗೆ ಭ್ರಷ್ಟಾಚಾರ, ಗಣಿಲೂಟಿಯೆಂದರೆ ಪ್ರಿಯ. ನಾವು ಅಂತವರಲ್ಲ. ನಮ್ಮನ್ನು ಉದ್ದೇಶಪೂರ್ವಕವಾಗಿ ಗುರಿ ಮಾಡಲಾಗುತ್ತಿದೆ. ರಾಜ್ಯದಲ್ಲಿನ ಯಾವುದೇ ತೊಂದರೆಗಳಿಗೆ ನಾವು ಕಾರಣರಲ್ಲ ಎಂದರು.
ಸಿಎಂ ಹೇಳಿದ್ದಾರಲ್ಲ, ಮತ್ತೇನು? ಅಕ್ರಮ ಗಣಿಗಾರಿಕೆ ಕುರಿತ ತನಿಖೆಯನ್ನು ಲೋಕಾಯುಕ್ತರೇ ನಡೆಸುತ್ತಾರೆ, ಅವರಿಗೆ ಸಂಪೂರ್ಣ ಅಧಿಕಾರವನ್ನು ನೀಡಲಾಗುತ್ತದೆ. ಯಾವುದೇ ಕಾರಣಕ್ಕೂ ಸಿಬಿಐಗೆ ವಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಸ್ಪಷ್ಟಪಡಿಸಿದ ಮೇಲೂ ಪ್ರತಿಪಕ್ಷಗಳು ಯಾಕೆ ಹೀಗಾಡುತ್ತಿವೆ? ಸಿಎಂ ಹೇಳಿಕೆಯ ನಂತರ ಅವರು ಸುಮ್ಮನಿರಬೇಕು -- ಹೀಗೆಂದು ಸಚಿವರು ಕಾಂಗ್ರೆಸ್ ಮತ್ತು ಜೆಡಿಎಸ್‌ಗಳಿಗೆ ಪಾಠ ಹೇಳಿದ್ದಾರೆ.
ಸಿಬಿಐ ಬಗ್ಗೆ ಕಾಂಗ್ರೆಸ್ ನಾಟಕ ಮಾಡುತ್ತಿದೆ. ಯಾವುದೇ ವಿಚಾರ ಬಂದಾಗಲೂ, ಅದನ್ನು ಸಿಬಿಐಗೆ ಕೊಡಬೇಕೆಂದು ಹೇಳುತ್ತಿವೆ ಪ್ರತಿಪಕ್ಷಗಳು. ಅವರಿಗೆ ಚರ್ಚೆಗೆ ಯಾವುದೇ ವಿಷಯಗಳಿಲ್ಲ. ಹಾಗಾಗಿ ಏನೂ ಇಲ್ಲದ ವಿಚಾರಗಳನ್ನು ಕೆದಕುತ್ತಿವೆ ಎಂದರು.
ಪಾದಯಾತ್ರೆ ಖಚಿತ... ನಮ್ಮ ಬಗ್ಗೆ ಸಿದ್ದರಾಮಯ್ಯ ಇಲ್ಲಸಲ್ಲದ ಟೀಕೆ ಮಾಡುತ್ತಿದ್ದಾರೆ. ಬಳ್ಳಾರಿಯಲ್ಲೇ ಸಮಾವೇಶ ಮಾಡುವುದಾಗಿ ಹೇಳಿದ್ದಾರೆ. ನಮ್ಮ ಮನೆಯ ಎದುರಿನಲ್ಲೇ ನಡೆಸಲಿ, ಬೇಕಾದ ಸವಲತ್ತುಗಳನ್ನು ನಾನೇ ಒದಗಿಸುತ್ತೇನೆ ಎಂದು ಸಚಿವರು ಭರವಸೆ ನೀಡಿದರು.
ನಮಗೂ ಸ್ವಾಭಿಮಾನ ಇದೆ. ಅನುಭವಿ ರಾಜಕಾರಣಿಯಾಗಿರುವ ಸಿದ್ದರಾಮಯ್ಯ ಸಭ್ಯ ವರ್ತನೆ ಉಳಿಸಿಕೊಳ್ಳಬೇಕಾಗಿತ್ತು. ಅವರು ನಮ್ಮನ್ನು ರೊಚ್ಚಿಗೆಬ್ಬಿಸುತ್ತಿರುವುದು ಸರಿಯಲ್ಲ. ಖಂಡಿತಾ ನಾವು ಬಳ್ಳಾರಿಯಿಂದ ಮೈಸೂರಿನ ತನಕ ಪಾದಯಾತ್ರೆ ಮಾಡಲಿದ್ದೇವೆ. ಚಾಮುಂಡೇಶ್ವರಿ ಅಮ್ಮನ ಪಾದಕ್ಕೆರಗಿ ನಾವು ಸಿದ್ದರಾಮಯ್ಯನವರ ಬಂಡವಾಳವನ್ನು ಹೊರಗೆಳೆಯುತ್ತೇವೆ. ಅವರೂ ಮಾತನಾಡಲಿ. ಯಾರು ಕೆಟ್ಟವರು ಎಂಬುದನ್ನು ಜನ ನಿರ್ಧರಿಸುತ್ತಾರೆ ಎಂದು ತನ್ನ ನಿಲುವನ್ನು ಶ್ರೀರಾಮುಲು ಖಚಿತಪಡಿಸಿದ್ದಾರೆ.