ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅಧಿವೇಶನಕ್ಕೆ ಬ್ರೇಕ್: ಧರಣಿ ಹಿಂಪಡೆದ ಪ್ರತಿಪಕ್ಷಗಳು
(Vidhana Soudha | Illegal Mining | Bellary | Karnataka Government | Session)
ಐದು ದಿನಗಳಾದರೂ ಸದನದ ಕಲಾಪಕ್ಕೆ ಅವಕಾಶ ನೀಡದ ಪ್ರತಿಪಕ್ಷಗಳು, ವಿಧಾನ ಸೌಧದಲ್ಲಿಯೇ ತಿಂದುಂಡು ಮಲಗುತ್ತಾ ಆಹೋರಾತ್ರಿ ಧರಣಿ ನಡೆಸಿದ್ದು, ಧರಣಿ ನಿಲ್ಲಿಸಿ ಕಲಾಪದಲ್ಲಿ ಪಾಲ್ಗೊಳ್ಳುವಂತೆ ಮಾಡಿದ ಯಾವುದೇ ಮನವಿಗಳಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ವಿಧಾನಸಭಾ ಅಧಿವೇಶನವನ್ನು ಸ್ಪೀಕರ್ ಕೆ.ಜಿ.ಬೋಪಯ್ಯ ಶುಕ್ರವಾರ ಅನಿರ್ದಿಷ್ಟಾವಧಿಗೆ ಮುಂದೂಡಿದ್ದಾರೆ.
ಕಲಾಪ ದಿಢೀರ್ ಮುಂದೂಡಿದ್ದನ್ನು ಖಂಡಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು, ತಮ್ಮ ಧರಣಿಗೆ ಮಂಗಳ ಹಾಡಿವೆ. ಸದನದ ಹೊರಗೆ ಸರಕಾರದ ವಿರುದ್ಧ ಹೋರಾಟ ಮುಂದುವರಿಸಲಾಗುವುದು ಎಂದು ಪ್ರತಿಪಕ್ಷ ಉಪನಾಯಕ ಟಿ.ಬಿ.ಜಯಚಂದ್ರ ಹಾಗೂ ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಅಲ್ಲದೆ, ಕಳೆದ ಎರಡು ದಿನಗಳಲ್ಲಿ ಚರ್ಚೆಯಿಲ್ಲದೆಯೇ ಬಿಜೆಪಿ ಸರಕಾರವು ಸದನದ ಅಂಗೀಕಾರ ಪಡೆದುಕೊಂಡ ಒಟ್ಟು 27 ವಿಧೇಯಕಗಳನ್ನು ತಡೆಹಿಡಿಯುವಂತೆ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುತ್ತದೆ ಎಂದು ರೇವಣ್ಣ ಅವರು ತಿಳಿಸಿದ್ದಾರೆ.
ಅಕ್ರಮ ಗಣಿ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಪ್ರತಿಪಕ್ಷಗಳು ಕಳೆದ ಐದು ದಿನಗಳಲ್ಲಿ ಸದನದಲ್ಲಿ ಧರಣಿ ನಡೆಸುತ್ತಿದ್ದವು. ಆದರೆ, ಸಿಬಿಐಗೆ ಒಪ್ಪಿಸಿದರೆ ತನಿಖೆ ವಿಳಂಬವಾಗುತ್ತದೆ, ರಾಜ್ಯದ ಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರ ನೀಡಿ, ಅವರಿಂದಲೇ ತನಿಖೆ ನಡೆಸಲಾಗುತ್ತದೆ ಎಂಬುದು ಬಿಜೆಪಿ ಸರಕಾರದ ಪಟ್ಟು.
ಇದೀಗ ಜುಲೈ 30ರವರೆಗೆ ನಡೆಯಬೇಕಿದ್ದ ಕಲಾಪವು ಅನಿರ್ದಿಷ್ಟಾವಧಿಗೆ ಮುಂದೂಡಿದೆ. ಮಧ್ಯಾಹ್ನ ಧರಣಿ ಕೈಬಿಟ್ಟು ಕಲಾಪದಲ್ಲಿ ಪಾಲ್ಗೊಳ್ಳುವಂತೆ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅವರು ಪ್ರತಿಪಕ್ಷ ಮುಖಂಡರನ್ನು ಕೇಳಿಕೊಂಡಿದ್ದರು. ಅದಕ್ಕೆ ಪ್ರತಿಪಕ್ಷಗಳು ಸೊಪ್ಪು ಹಾಕದೆ, ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ, ಗದ್ದಲ, ಕೂಗಾಟ ಮುಂದುವರಿಸಿದವು.