ಸಂಪುಟದಲ್ಲಿ ಭ್ರಷ್ಟ ಸಚಿವರು ಇಲ್ಲ, ಹಾಗಾಗಿ ಯಾವುದೇ ಸಚಿವರ ವಿರುದ್ದ ಕ್ರಮ ಕೈಗೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದು, ಅದಿರು ರಫ್ತು ನಿಷೇಧ ಕುರಿತಂತೆ ಗೃಹ ಸಚಿವ ಪಿ.ಚಿದಂಬರಂ ಅವರ ಜೊತೆ ಚರ್ಚೆ ನಡೆಸಿರುವುದಾಗಿ ತಿಳಿಸಿದರು.
ಶನಿವಾರ ಬೆಳಿಗ್ಗೆ ದೆಹಲಿಯ ಜನಪಥ್ ರಸ್ತೆಯಲ್ಲಿರುವ ಗೃಹಸಚಿವ ಚಿದಂಬರಂ ಅವರ ನಿವಾಸಕ್ಕೆ ಭೇಟಿ ನೀಡಿದ ನಂತರ ಮುಖ್ಯಮಂತ್ರಿಗಳು ಸುದ್ದಿಗಾರರೊಂದಿಗೆ ಮಾತನಾಡುತ್ತ ಈ ಅಭಿಪ್ರಾಯ ವ್ಯಕ್ತಪಡಿಸಿದರು. ಅಲ್ಲದೇ, ಒಂದು ವೇಳೆ ಆರೋಪ ಸಾಬೀತಾದರೆ ಅಂತಹ ಸಚಿವರನ್ನು ಸಚಿವ ಸಂಪುಟದಿಂದ ಕೈಬಿಡಲಾಗುವುದು ಎಂದರು.
ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಕುರಿತಂತೆ ಸಮಗ್ರ ಅಂಕಿ-ಅಂಶಗಳ ಮಾಹಿತಿಯನ್ನು ಗೃಹ ಸಚಿವರಿಗೆ ನೀಡಿದ್ದೇನೆ. ಅಷ್ಟೇ ಅಲ್ಲ ಅಕ್ರಮ ಅದಿರು ಸಾಗಾಟ ನಿಲ್ಲಿಸಬೇಕಾದರೆ. ರಫ್ತು ನಿಷೇಧವೊಂದೇ ಇದಕ್ಕೆ ದಾರಿ ಎಂದು ವಿವರಿಸಿರುವುದಾಗಿಯೂ ಈ ಸಂದರ್ಭದಲ್ಲಿ ಹೇಳಿದರು.
ರಾಜ್ಯದಲ್ಲಿನ ಆಡಳಿತಾರೂಢ ಸರಕಾರದಲ್ಲಿ ಭ್ರಷ್ಟ ಸಚಿವರು ಇಲ್ಲ, ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಅನಾವಶ್ಯಕವಾಗಿ ಟೀಕಿಸುತ್ತಿದ್ದಾರೆ ಎಂದು ಆರೋಪಿಸಿದರು. ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ, ಬೆಳಗಾವಿ ಗಡಿವಿವಾದ ಕುರಿತಂತೆ ಗೃಹ ಸಚಿವರ ಜೊತೆ ಚರ್ಚಿಸಲಾಯಿತು ಎಂದರು. ನಂತರ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವುದಾಗಿ ತಿಳಿಸಿದರು.
ಚಿದಂಬರಂ ಅವರ ಭೇಟಿಯ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಜೊತೆ ಸಚಿವ ವಿ.ಎಸ್.ಆಚಾರ್ಯ, ಪಕ್ಷದ ವಕ್ತಾರ ಧನಂಜಯ್ ಕುಮಾರ್ ಹಾಜರಿದ್ದರು.