ಪುರಾವೆ ಕೊಡಿ-ರೆಡ್ಡಿ ಬ್ರದರ್ಸ್ ವಜಾಗೊಳಿಸ್ತೇನೆ: ಯಡಿಯೂರಪ್ಪ
ನವದೆಹಲಿ, ಶನಿವಾರ, 17 ಜುಲೈ 2010( 11:54 IST )
ರೆಡ್ಡಿ ಸಹೋದರರು ಅಕ್ರಮ ಗಣಿಗಾರಿಕೆ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಸೂಕ್ತ ಪುರಾವೆ ಒದಗಿಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲು ಯಾವುದೇ ರೀತಿಯ ಹಿಂಜರಿಕೆ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.
ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಹಗರಣ ಮತ್ತು ಭ್ರಷ್ಟ ಸಚಿವರಾದ ರೆಡ್ಡಿ ಸಹೋದರರನ್ನು ಕೈಬಿಡುವಂತೆ ಪ್ರತಿಪಕ್ಷಗಳು ಒತ್ತಾಯಿಸುತ್ತಿರುವ ಹಿನ್ನೆಲೆಯಲ್ಲಿ ರಾಜಧಾನಿಗೆ ಆಗಮಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಗೃಹಸಚಿವ ಚಿದಂಬರಂ ಅವರನ್ನು ಶನಿವಾರ ಬೆಳಿಗ್ಗೆ ಭೇಟಿಯಾದ ನಂತರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಈ ರೀತಿಯಾಗಿ ಪ್ರತಿಕ್ರಿಯಿಸಿದರು.
ರಾಜ್ಯದಲ್ಲಿನ ಅಕ್ರಮ ಗಣಿ ಹಗರಣವನ್ನು ಸಿಬಿಐಗೆ ಒಪ್ಪಿಸುವುದಿಲ್ಲ, ಆ ಬಗ್ಗೆ ಲೋಕಾಯುಕ್ತರಿಗೆ ಪೂರ್ಣ ಅಧಿಕಾರ ನೀಡಿ ತನಿಖೆ ನಡೆಸುವುದಾಗಿ ಚಿದಂಬರಂ ಅವರಿಗೂ ಮಾತುಕತೆ ವೇಳೆ ಸ್ಪಷ್ಟಪಡಿಸಿದರುವುದಾಗಿ ಹೇಳಿದರು. ಆದರೆ ರೆಡ್ಡಿ ಸಹೋದರರ ಬಗ್ಗೆ ಪ್ರಶ್ನಿಸಿದಾಗ, ಅವರು ನಡೆಸಿರುವ ಅಕ್ರಮದ ಬಗ್ಗೆ ಸಾಕ್ಷಿ ಇದ್ದರೆ ಒದಗಿಸಿ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇನೆ ಎಂದರು.
ಕರ್ನಾಟಕದ ಕೆಲವು ಭಾಗದಲ್ಲಿ ಕಾನೂನಿಗೆ ಬೆಲೆಯೇ ಇಲ್ಲದಂತಾಗಿದೆ. ಆ ನಿಟ್ಟಿನಲ್ಲಿ ಕರ್ನಾಟಕ ಜಂಗಲ್ ರಾಜ್ ಆಗಿದೆ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಚಿದಂಬರಂ, ಪ್ರಧಾನಿ, ರಾಷ್ಟ್ರಪತಿಯವರನ್ನು ಭೇಟಿಯಾದ ನಂತರ ಮಾತನಾಡುತ್ತ ಗಂಭೀರವಾಗಿ ಆರೋಪಿಸಿದ್ದರು.
ಈ ಹಿನ್ನೆಲೆಯಲ್ಲಿ ದೆಹಲಿಗೆ ದೌಡಾಯಿಸಿರುವ ಮುಖ್ಯಮಂತ್ರಿಗಳು ಚಿದಂಬರಂ ಅವರನ್ನು ಭೇಟಿಯಾಗಿ ರಾಜ್ಯದ ಗಣಿ,ಕಾನೂನು ಸುವ್ಯವಸ್ಥೆ, ಬೆಳಗಾವಿ ಗಡಿವಿವಾದ ಕುರಿತು ಚರ್ಚಿಸಿದ್ದಾರೆ. ಇದೀಗ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವುದಾಗಿ ತಿಳಿಸಿರುವ ಅವರು, ನಂತರ ಬಿಜೆಪಿ ಪಕ್ಷದ ವರಿಷ್ಠರ ಜೊತೆಯೂ ಮಾತುಕತೆ ನಡೆಸುವುದಾಗಿ ಹೇಳಿದರು.