ಶಾಸಕರ ಭವನದಲ್ಲೇ ಲಂಚ ಪಡೆಯುತ್ತಿದ್ದ ಕೆಜಿಎಫ್ ಶಾಸಕ ವೈ.ಸಂಪಂಗಿಯನ್ನು ಲೋಕಾಯುಕ್ತರು ರೆಡ್‌ಹ್ಯಾಂಡ್ ಆಗಿ ಸೆರೆಹಿಡಿದು ನಂತರ ತನಿಖೆ, ಕ್ಲೀನ್‌ಚಿಟ್ ಮೂಲಕ ಪ್ರಕರಣ ಅಂತ್ಯ ಕಂಡಿತ್ತು. ಆದರೆ ಇದೀಗ ಬಿಬಿಎಂಪಿ ಸದಸ್ಯರೊಬ್ಬ ಲಂಚ ಪಡೆಯುತ್ತಿರುವಾಗಲೇ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಗಣೇಶ್ ಮಂದಿರ 165ನೇ ವಾರ್ಡ್‌ನಿಂದ ಆಯ್ಕೆಯಾಗಿದ್ದ ಕಾಂಗ್ರೆಸ್‌ಸದಸ್ಯ ಎಲ್.ಗೋವಿಂದರಾಜು ಗುತ್ತಿಗೆದಾರರೊಬ್ಬರ ಬಳಿ ಎರಡು ಲಕ್ಷ ರೂಪಾಯಿ ಲಂಚದ ಹಣ ಸ್ವೀಕರಿಸುತ್ತಿದ್ದಾಗಲೇ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಎಸ್ಪಿ ಮಧುಕರ್ ಶೆಟ್ಟಿ ನೇತೃತ್ವದ ತಂಡಕ್ಕೆ ಸಿಕ್ಕಿಬಿದ್ದಿದ್ದಾರೆ.
ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಅವರ ಕಚೇರಿಗೆ ಬಂದ ದೂರಿನ ಹಿನ್ನೆಲೆಯಲ್ಲಿ ಶನಿವಾರ ಬೆಳಿಗ್ಗೆ ದಿಢೀರ್ ದಾಳಿ ನಡೆದಿದೆ. ಕಟ್ಟಡವೊಂದರ ನಕ್ಷೆ ಉಲ್ಲಂಘನೆ ಸಂಬಂಧ ಸಾಮಾನ್ಯ ಗುತ್ತಿಗೆದಾರ ಉದಯ ಕುಮಾರ್ ಎಂಬುವರಿಂದ ಗೋವಿಂದರಾಜು ಐದು ಲಕ್ಷ ರೂ. ಲಂಚ ಕೇಳಿದ್ದರು. ಮುಂಗಡವಾಗಿ ಎರಡು ಲಕ್ಷ ಹಣ ನೀಡಿದ್ದ ಉದಯಕುಮಾರ್ ಇಂದು ಬಾಕಿ ಹಣ ನೀಡಬೇಕಿತ್ತು. ಈ ಬಗ್ಗೆ ಶುಕ್ರವಾರ ಲೋಕಾಯುಕ್ತರಿಗೆ ಲಿಖಿತ ದೂರು ನೀಡಿದ್ದರು.
ಇಂದು ಬೆಳಿಗ್ಗೆ ಉದಯಕುಮಾರ್ ಲಕ್ಷ್ಮಣಪ್ಪ ಗಾರ್ಡನ್‌ನಲ್ಲಿರುವ ಗೋವಿಂದರಾಜು ಮನೆಗೆ ತೆರಳಿ ಎರಡು ಲಕ್ಷ ರೂ.ಲಂಚದ ಹಣ ನೀಡುತ್ತಿದ್ದಾಗ ಲೋಕಾಯುಕ್ತ ಎಡಿಜಿಪಿ ರೂಪ್ ಕುಮಾರ್ ದತ್ತ ಮಾರ್ಗದರ್ಶನದಲ್ಲಿ ಮಧುಕರ ಶೆಟ್ಟಿ ಮತ್ತು ಸಿಬ್ಬಂದಿ ದಾಳಿ ನಡೆಸಿ ಪಾಲಿಕೆ ಸದಸ್ಯ ಗೋವಿಂದರಾಜುವನ್ನು ಬಂಧಿಸಿದರು. ಲೋಕಾಯುಕ್ತರು ವಿಚಾರಣೆ ನಡೆಸಿದ ನಂತರ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.