ಅಕ್ರಮ ಗಣಿ ಹಗರಣವನ್ನು ಕೇಂದ್ರ ಸರಕಾರವೇ ಸ್ವಯಂ ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಆಗ್ರಹಿಸಿದ್ದಾರೆ.
ಕೇಂದ್ರಕ್ಕೆ ಈ ಅಧಿಕಾರ ಇಲ್ಲ ಎಂಬ ವಾದಗಳು ತಪ್ಪು. ಕೋರ್ಟ್ ನಿರ್ದೇಶನ ಪಡೆದು ಸಿಬಿಐ ತನಿಖೆಗೆ ಒಪ್ಪಿಸಬಹುದು. ಈಗಾಗಲೇ ಸಾಕಷ್ಟು `ವಿಳಂಭ ಲೋಪ' ಆಗಿರುವುದರಿಂದ ಕೇಂದ್ರ ತಕ್ಷಣ ಕಾರ್ಯೋನ್ಮುಖವಾಗಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ರಾಜ್ಯ ಸರಕಾರದ ಶಿಫಾರಸಿನ ಮೇಲೆ ಕೇಂದ್ರ ಸರಕಾರವೇ ಗಣಿಗಾರಿಕೆಗೆ ಅನುಮತಿ ನೀಡುತ್ತದೆ. ಅಕ್ರಮ ನಡೆದರೆ ತಡೆಯುವ, ನಡೆದಿದ್ದರೆ ತನಿಖೆ ನಡೆಸುವ ಅಧಿಕಾರವೂ ಕೇಂದ್ರಕ್ಕಿದೆ ಎಂದು ಪ್ರತಿಪಾದಿಸಿದರು.
ರಾಜ್ಯದಲ್ಲಿ ಬಹುಕೋಟಿ ಮೊತ್ತದ ಅಕ್ರಮ ಗಣಿ ವ್ಯವಹಾರ ನಡೆದಿರುವುದನ್ನು ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ. ಅಕ್ರಮ ನಡೆಸಿಯೂ ಸಂಪುಟದಲ್ಲಿರುವ ರೆಡ್ಡಿ ಸಹೋದರರ ಒತ್ತಡಕ್ಕೆ ಮಣಿದು ಸಿಬಿಐ ತನಿಖೆಗೆ ವಹಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಟೀಕಿಸಿದರು.
ಹಗರಣವನ್ನು ಸಿಬಿಐಗೆ ವಹಿಸಿದ್ದೇ ಆದರೆ ಯಡಿಯೂರಪ್ಪ 24 ತಾಸಿನೊಳಗೆ ಅಧಿಕಾರ ಕಳೆದುಕೊಳ್ಳುತ್ತಾರೆ. ಅಷ್ಟರ ಮಟ್ಟಿಗೆ ರೆಡ್ಡಿಗಳು ಅವರನ್ನು ಹೆದರಿಸಿ, ಬೆದರಿಸಿ ಇಟ್ಟುಕೊಂಡಿದ್ದಾರೆ. ಇದೇ ಕಾರಣಕ್ಕೆ ರಾಜ್ಯದ ಬೊಕ್ಕಸ ಲೂಟಿ ಆಗುತ್ತಿದ್ದರೂ ಮುಖ್ಯಮಂತ್ರಿ ಕುರ್ಚಿಗೆ ಅಂಟಿ ಕುಳಿತಿದ್ದಾರೆ ಛೇಡಿಸಿದರು.