ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರ, ಮಹಾರಾಷ್ಟ್ರ ಮತ್ತು ಕರ್ನಾಟಕ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಪರಿಹಾರ ರೂಪಿಸಬೇಕು ಎಂದು ಕರ್ನಾಟಕ ಗಡಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಶಾಸಕ ಚಂದ್ರಕಾಂತ ಬೆಲ್ಲದ ಒತ್ತಾಯಿಸಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗಡಿ ಪ್ರದೇಶಗಳಲ್ಲಿ ಮರಾಠಿ ಭಾಷಿಕರ ಮೇಲೆ ಕನ್ನಡಿಗರು ಹಲ್ಲೆ ನಡೆಸುತ್ತಿದ್ದಾರೆಂಬ ಆರೋಪಗಳು ಸತ್ಯಕ್ಕೆ ದೂರವಾಗಿವೆ. ಇಂತಹ ಆರೋಪಗಳು ಮಹಾರಾಷ್ಟ್ರದ ಕುತಂತ್ರಗಳಷ್ಟೇ ಎಂದು ಹೇಳಿದರು. ಎರಡೂ ರಾಜ್ಯಗಳ ಗಡಿ ವಿವಾದ ಸದ್ಯ ಸುಪ್ರಿಂಕೋರ್ಟ್‌ನಲ್ಲಿರುವುದರಿಂದ ಕೇಂದ್ರ ಸರಕಾರ ಮಧ್ಯ ಪ್ರವೇಶಿಸಿ ಶಾಂತಿ ಕದಡದಂತೆ ನೋಡಿಕೊಳ್ಳಬೇಕು. ಭಾಷೆಗಿಂತ ದೇಶ ಒಂದು ಎಂಬ ಭಾವನೆ ಎಲ್ಲರಲ್ಲೂ ಮೂಡುವಂತೆ ಮಾಡಬೇಕು ಎಂದರು.
ಗಡಿ ಪ್ರದೇಶಗಳಲ್ಲಿ ಕನ್ನಡಿಗರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಬೆಳಗಾವಿ ಸೇರಿದಂತೆ ಇನ್ನಿತರ ಮರಾಠಿ ಭಾಷಿಕರ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕೆಂಬ ಮಹಾರಾಷ್ಟ್ರ ಧುರೀಣರ ಹೇಳಿಕೆಗಳನ್ನು ಬೆಲ್ಲದ ಖಂಡಿಸಿದರು.
ಕರ್ನಾಟಕ ಹಾಗೂ ಮಹಾರಾಷ್ಟ್ತ್ರ ರಾಜ್ಯಗಳ ಗಡಿ ವಿವಾದ ಸುಪ್ರಿಂಕೋರ್ಟ್‌ನಲ್ಲಿದೆ. ಈ ಸನ್ನಿವೇಶದಲ್ಲಿ ಕೇಂದ್ರ ಸರಕಾರ ತಾನು ಸಲ್ಲಿಸಿದ ಅಫಿಡೆವಿಟ್‌ನಲ್ಲಿ ಬೆಳಗಾವಿ, ಬೀದರ, ಗುಲ್ಬರ್ಗಾ ಪ್ರದೇಶಗಳು ಕರ್ನಾಟಕದ ಅವಿಭಾಜ್ಯ ಅಂಗ ಎಂದು ಹೇಳುವ ಮೂಲಕ ಸತ್ಯ ಸಂಗತಿ ಪರವಾಗಿ ನಿಂತಿರುವುದು ಸ್ವಾಗತಾರ್ಹ ಎಂದರು.