ರಾಜ್ಯದ ಎಲ್ಲ ಸರಕಾರಿ ಆಸ್ಪತ್ರೆಗಳಿಗೆ ಅತ್ಯಾಧುನಿಕ ಉಪಕರಣಗಳನ್ನು ನೀಡಲು ರಾಜ್ಯ ಸರಕಾರ ಚಿಂತನೆ ನಡೆಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರಗೌಡ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಆವಿಷ್ಕಾರಗಳು ಆಗುತ್ತಿದ್ದು, ವಿವಿಧ ಕಾಯಿಲೆಗಳಿಂದ ಬಳಲುವ ರೋಗಿಗಳಿಗೆ ಸೂಕ್ತ ಕಾಲದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಲು ನೂತನ ಉಪಕರಣಗಳು ಸಾಕಷ್ಟು ಪರಿಣಾಮಕಾರಿಯಾಗಲಿವೆ ಎಂದರು.
ಕಿಮ್ಸ್‌ಗೆ ಅತ್ಯಾಧುನಿಕ ಉಪಕರಣಗಳನ್ನು ಒದಗಿಸಲು ಶೀಘ್ರದಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಲಾಗುವುದು. ಗ್ಯಾಸ್ಟ್ತ್ರೋ ಎಂಡೋಲಾಜಿಗೆ ತಜ್ಞ ವೈದ್ಯರನ್ನು ನೇಮಕ ಮಾಡಲಾಗುವುದು ಎಂದ ಅವರು, ರಾಜ್ಯದ ಕೇಂದ್ರ ಬಿಂದುವಾಗಿರುವ ಹುಬ್ಬಳ್ಳಿ ಸಿಲಿಕಾನ್ ಹಬ್ ಆಗಿ ಮಾರ್ಪಾಡುಗೊಳ್ಳುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ರಾಜ್ಯದ 10 ಕಾಲೇಜುಗಳಲ್ಲಿ ವೈದ್ಯಕೀಯ ಸೀಟು ಹೆಚ್ಚಳಕ್ಕೆ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಮಾನ್ಯತೆ ನೀಡಿದೆ. ಅದರಂತೆ ಕಿಮ್ಸ್‌ನಲ್ಲಿ ಯೂ 50 ಸೀಟು ಹೆಚ್ಚಳವಾಗಿದೆ. ಇದರಿಂದ ವೈದ್ಯಕೀಯ ಕೋರ್ಸ್‌ಗೆ ಸೇರ ಬಯಸುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಎಂಜಿನಿಯರಿಂಗ್ ಸೀಟು ಆಯ್ಕೆ ಪ್ರಕ್ರಿಯೆ ಮುಗಿದ ಕೂಡಲೇ ಎರಡನೇ ಸುತ್ತಿನಲ್ಲಿ ವೈದ್ಯಕೀಯ ಸೀಟು ಹಂಚಿಕೆ ಪ್ರಕ್ರಿಯೆ ಆರಂಭವಾಗಲಿದೆ.
ರಾಜ್ಯದಲ್ಲಿ 20 ಸರಕಾರಿ ವೈದ್ಯಕೀಯ ಕಾಲೇಜು, 20 ಖಾಸಗಿ ಕಾಲೇಜು ಹಾಗೂ 9 ಡೀಮ್ಡ್ ಕಾಲೇಜುಗಳಿವೆ. ಸ್ನಾತಕೋತ್ತರ ಆರು ಸರಕಾರಿ ಕಾಲೇಜುಗಳಲ್ಲಿ ಒಟ್ಟು 225 ಸೀಟು ಲಭ್ಯವಿದೆ. ಇದರಲ್ಲಿ 119 ಸೀಟು ಹಂಚಿಕೆ ಮಾಡಲಾಗುತ್ತದೆ. ಉಳಿದಂತೆ ಖಾಸಗಿ ಕಾಲೇಜುಗಳಲ್ಲಿ ಒಟ್ಟು 619 ಸೀಟುಗಳಿದ್ದು, ಇದರಲ್ಲಿ ಸರಕಾರಿ ಕೋಟಾದಡಿ 186 ಸೀಟು ವೈದ್ಯಕೀಯ ವಿದ್ಯಾರ್ಥಿಗಳಿಗೆ ಲಭ್ಯವಿದೆ ಎಂದರು.