ಅಕ್ರಮ ಗಣಿಗಾರಿಕೆ ಕುರಿತಂತೆ ರೆಡ್ಡಿ ಸಹೋದರರ ವಿರುದ್ಧ ಕಾಂಗ್ರೆಸ್ ಮತ್ತು ಜೆಡಿಎಸ್ ಮಿತ್ರರು ಅನಾವಶ್ಯಕವಾಗಿ ಟೀಕಿಸುತ್ತಿರುವುದಾಗಿ ಆರೋಪಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರೆಡ್ಡಿ ಬ್ರದರ್ಸ್‌ನ್ನು ಸಂಪುಟದಿಂದ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.
ರೆಡ್ಡಿ ಸಹೋದರರ ವಿರುದ್ಧ ಯಾವುದೇ ಆರೋಪಗಳಿಲ್ಲ. ಅದಕ್ಕೆ ಸಾಕ್ಷ್ಯಾಧಾರಗಳ ಕೊರತೆ ಇದೆ. ಒಂದು ವೇಳೆ ಸೂಕ್ತ ಪುರಾವೆ ಇದ್ದಲ್ಲಿ ವಿಪಕ್ಷಗಳು ನ್ಯಾಯಾಲಯದ ಮೆಟ್ಟಿಲೇರಲಿ ಎಂದು ಅವರು ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಸಲಹೆ ನೀಡಿದರು.
ಗಣಿ ಅವ್ಯವಹಾರದಲ್ಲಿ ಶಾಮೀಲಾಗಿರುವವರನ್ನು ಸಂಪುಟದಿಂದ ಕೈಬಿಡಬೇಕು ಎಂಬ ವಿಪಕ್ಷಗಳ ಒತ್ತಡಕ್ಕೆ ಮಣಿಯಬೇಕಾಗಿರುವ ಯಡಿಯೂರಪ್ಪ ರೆಡ್ಡಿ ಸಹೋದರರೊಂದಿಗಿನ ಬೆಳಗಿನ ಉಪಹಾರ ಸೇವಿಸಿದ ನಂತರ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ರೆಡ್ಡಿ ಸಹೋದರರು ಅಕ್ರಮ ಗಣಿಗಾರಿಕೆ ನಡೆಸುತ್ತಾರೆಂಬ ಬಗ್ಗೆ ಯಾವುದೇ ಪುರಾವೆ ಇಲ್ಲ. ಹಾಗಾಗಿ ಅವರನ್ನು ಸಂಪುಟದಿಂದ ಕೈಬಿಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮತ್ತು ಗೃಹಮಂತ್ರಿ ಪಿ.ಚಿದಂಬರಂ ಅವರ ಜೊತೆ ಮಾತುಕತೆಯ ಬಗ್ಗೆ ವಿವರಿಸುತ್ತ, ಯಡಿಯೂರಪ್ಪ ಅಕ್ರಮ ಗಣಿಗಾರಿಕೆಗೆ ರೆಡ್ಡಿ ಸಹೋದರರು ಜವಾಬ್ದಾರರಲ್ಲ ಎಂದು ಹೇಳಿದರು.