ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕೇಸರಿ ಧ್ವಜ ಮತ್ತು ಶಿವಸೇನೆ ವರಿಷ್ಠ ಬಾಳ ಠಾಕ್ರೆ ಭಾವಚಿತ್ರ ಸುಟ್ಟುಹಾಕಿದ್ದಾರೆ ಎಂದು ಆರೋಪಿಸಿ ಎಂಇಎಸ್, ಶಿವಸೇನೆ ಭಾನುವಾರ ಕರೆ ನೀಡಿದ್ದ ಬೆಳಗಾವಿ ಬಂದ್‌ಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗದೆ ನೀರಸವಾಗಿತ್ತು.
ಬಂದ್ ಯಶಸ್ವಿಯಾಗದಿದ್ದರಿಂದ ಆಕ್ರೋಶಗೊಂಡ ಎಂಇಎಸ್ ಕಿಡಿಗೇಡಿಗಳು ಅಲ್ಲಲ್ಲಿ ಕಲ್ಲು ತೂರಾಟ ನಡೆಸಿದ ಪರಿಣಾಮ ರಾಜ್ಯ ಸಾರಿಗೆ ಸಂಸ್ಥೆಯ ಆರು ಬಸ್‌ಗಳು ಜಖಂಗೊಂಡಿವೆ. ಖಾಸಬಾಗದ ಬಸವಣ ಗಲ್ಲಿಯಲ್ಲಿ ವ್ಯಾಪಾರಸ್ಥರ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆಯೂ ನಡೆದಿದೆ.
ನಗರದ ಚವಾಣ್ ಗಲ್ಲಿಯಲ್ಲಿ ಬಲವಂತವಾಗಿ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಲು ಒತ್ತಡ ಹೇರುತ್ತಿದ್ದ ಯುವಕರ ಮೇಲೆ ಪೊಲೀಸರು ಲಘ ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದರು. ಬಂದ್‌ನಿಂದ ಸಾರಿಗೆ ವ್ಯವಸ್ಥೆಗೆ ಯಾವುದೇ ತೊಂದರೆ ಉಂಟಾಗಿಲ್ಲವಾಗಿತ್ತು. ಜನ ಸಂಚಾರವೂ ಎಂದಿನಂತೆಯೇ ಇತ್ತು. ಎಂಇಎಸ್, ಶಿವಸೇನೆ ಬಂದ್ ಕರೆಗೆ ಮರಾಠಿಗರೇ ಬೆಂಬಲ ನೀಡಿಲ್ಲದಿರುವುದು ವಿಶೇಷವಾಗಿತ್ತು.