ಅಕ್ರಮ ಗಣಿಗಾರಿಕೆಯಲ್ಲಿ ಬಳ್ಳಾರಿ ಸಚಿವರು ಭಾಗಿಯಾಗಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಕ್ಲೀನ್ ಚಿಟ್ ನೀಡಿರುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಬಗ್ಗೆ ಸಂಪೂರ್ಣ ತನಿಖೆ ನಡೆದು ಸತ್ಯ ಹೊರಬೀಳುವವರೆಗೂ ಯಾರಿಗೂ ಯಾರು ಸರ್ಟಿಫಿಕೇಟ್ ನೀಡುವುದು ಸರಿಯಲ್ಲ ಎಂದರು.
ಅಕ್ರಮ ಗಣಿಗಾರಿಕೆ ಬಗ್ಗೆ ನಡೆದಿರುವ ತನಿಖೆ ಸಂಪೂರ್ಣಗೊಂಡ ನಂತರ ತಪ್ಪಿತಸ್ಥರು ಯಾರೆಂಬುದು ಗೊತ್ತಾಗಲಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಉಪಲೋಕಾಯುಕ್ತರಾಗಿ ಶಶಿಧರ ಭೀಮಾರಾವ್ ಮಜಗೆ ಅವರು ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದ ನಂತರ ಲೋಕಾಯುಕ್ತ ನ್ಯಾ.ಹೆಗ್ಡೆಯವರು ಸುದ್ದಿಗಾರರೊಂದಿಗೆ ಮಾತನಾಡುತ್ತ ಈ ರೀತಿ ಪ್ರತಿಕ್ರಿಯಿಸಿದರು.
ಯಾವುದೇ ಕಾರಣವಿಲ್ಲದೇ, ಸಾಕ್ಷ್ಯಾಧಾರಗಳೂ ಇಲ್ಲದೆ ತೀರ್ಪು ನೀಡಲು ಸಾಧ್ಯವಿಲ್ಲ. ತನಿಖೆ ಪೂರ್ಣವಾಗಲಿ, ಯಾರು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದಾರೆ ಎಂಬುದು ಬಹಿರಂಗವಾಗಲಿದೆ ಎಂದರು. ಅಲ್ಲದೆ, ಗಣಿಗಾರಿಕೆ ಅವ್ಯವಹಾರ ಹೊರ ರಾಜ್ಯಗಳಿಗೂ ವಿಸ್ತರಿಸಿದ್ದರೆ ತನಿಖೆಗೆ ಯಾವುದೇ ಅಡ್ಡಿಯಾಗದು ಎಂದು ಹೇಳಿದರು.