ರೈತ ಸ್ವಾವಲಂಬಿಯಾಗಿ ಬದುಕಬೇಕಾದರೆ ಪರಿಸರಕ್ಕೆ ಪೂರಕವಾಗಿ ಅಂತರ್ಜಲ ಹೆಚ್ಚಳ, ಸಾವಯವ ಗೊಬ್ಬರ ಬಳಕೆ, ಜಾನುವಾರುಗಳ ಸಾಕಾಣಿಕೆ, ದೇಶಿ ಬೀಜ ಬಿತ್ತನೆ, ಭೂಮಿ ಫಲವತ್ತತೆ ಕಾಪಾಡಲು ಮತ್ತು ಮಣ್ಣು ಹರಿದು ಹೋಗದಂತೆ ಬದು ನಿರ್ಮಾಣ, ಇಳಿಕಲಿಗೆ ಅಡ್ಡಲಾಗಿ ಒಡ್ಡು ನಿರ್ಮಿಸಲು ರೈತರು ಮುಂದಾಗಬೇಕೆಂದು ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ ಹೇಳಿದರು.
ಅವರು ಸಮೀಪದ ರಾಮತೀರ್ಥ ಗ್ರಾಮದಲ್ಲಿ 'ಸುಭಿಕ್ಷ ರಾಮತೀರ್ಥ' ಅದಮ್ಯ ಚೇತನ ಸಂಸ್ಥೆಯ ಸಹಯೋಗದಲ್ಲಿ ಸಮಗ್ರ ಗ್ರಾಮಾಭಿವೃದ್ದಿ ಯೋಜನೆ ಕಾರ್ಯಕ್ರಮದಲ್ಲಿ ಸಾಮೂಹಿಕ ಶ್ರಮದಾನದಲ್ಲಿ ಪಾಲ್ಗೊಂಡು ಮಾತನಾಡಿದರು.
ನಿಜಕ್ಕೂ ಇಂದು ರಾಜ್ಯದಲ್ಲಿ ಸಂಪತ್ತಿನ ಕೊರತೆ ಎಲ್ಲೂ ಕಾಡುವುದಿಲ್ಲ. ಇರುವುದನ್ನು ಬಳಸಿಕೊಂಡು ಹೋದರೆ ನಮ್ಮಷ್ಟು ಪ್ರಗತಿ ಸಾಧಿಸಲು ಇನ್ನಾರಿಗೂ ಸಾಧ್ಯವಿಲ್ಲ ಎಂದರು.
ಸಮಾರಂಭದ ಸಾನಿಧ್ಯವನ್ನು ಕನ್ನೂರ ಕಮರಿ ಮಠದ ತಾರಾಚಂದ ಮಹಾರಾಜರು ವಹಿಸಿ, ಬೆಂಬಿಡದ ಕೆಲಸದಲ್ಲಿ ನಗರ ಬಿಟ್ಟು ತೇಜಸ್ವಿನಿ ಅನಂತಕುಮಾರ ಅವರ ನೇತೃತ್ವದಲ್ಲಿ ಪುಟ್ಟ ಹಳ್ಳಿಯನ್ನು ದತ್ತು ತೆಗೆದುಕೊಂಡು ಸುಭಿಕ್ಷ ಗ್ರಾಮ ಮಾಡಲು ಪಣತೊಟ್ಟಿರುವ ಅದಮ್ಯ ಚೇತನ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.