ಅಕ್ರಮ ಗಣಿ ಹಗರಣದ ಕುರಿತು ಸಿಬಿಐ ತನಿಖೆಗೆ ಒಪ್ಪಿಸಲು ಮೀನಮೇಷ ಎಣಿಸುತ್ತಿರುವ ಸರಕಾರದ ವಿರುದ್ಧ ಕಿಡಿಕಾರಿರುವ ಲೋಕಸಭಾ ಸದಸ್ಯ ಹೆಚ್.ವಿಶ್ವನಾಥ್ ರಾಜ್ಯ ಸರಕಾರ ಕಳ್ಳರ ಸಂತೆಯಾಗಿದೆ ಎಂದು ಆರೋಪಿಸಿದ್ದಾರೆ.
ಅರಸೀಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆ ಸಂಬಂಧ ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಕಾಂಗ್ರೆಸ್ ಪಕ್ಷದ ಮುಖಂಡರು ಅಕ್ರಮ ಗಣಿಗಾರಿಕೆಯಲ್ಲಿ ಇದ್ದರೆ ಅವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಿ ಎಂದು ಸಲಹೆ ನೀಡಿದರು.
ಅಕ್ರಮ ಗಣಿಗಾರಿಕೆ ಹಗರಣ ಅಂತರ್ ರಾಜ್ಯ ಮಟ್ಟದಲ್ಲಿ ನಡೆದಿರುವುದರಿಂದ ಸಿಬಿಐ ತನಿಖೆ ಸೂಕ್ತವಾಗಿದೆ. ಅದರ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಿಬಿಐ ತನಿಖೆಗೆ ಒತ್ತಾಯಿಸುತ್ತಿದೆ. ಲೋಕಾಯುಕ್ತರ ಮೇಲೂ ಸಹ ಅಪಾರ ವಿಶ್ವಾಸವಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
2002ರಲ್ಲಿ ಏನೂ ಇಲ್ಲದ ಹೆಡ್‌ಕಾನ್ಸ್‌ಟೇಬಲ್ ಮಕ್ಕಳು ಸಾವಿರಾರು ಕೋಟಿ ರೂಪಾಯಿ ಆಸ್ತಿ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ಅಕ್ರಮ ಗಣಿಗಾರಿಕೆಯ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಯಾವುದೇ ಚಕಾರವೆತ್ತದೆ ಕೆಲವರನ್ನು ರಕ್ಷಣೆ ಮಾಡುತ್ತಿದ್ದಾರೆಂದು ಆರೋಪಿಸಿದರು.