ಅಮೂಲ್ಯ ಅರಣ್ಯ ಸಂಪತ್ತು ಸಂರಕ್ಷಿಸುವ ಉದ್ದೇಶದಿಂದ ಸೂಕ್ತ ಮಾರ್ಗಸೂಚಿ ರಚಿಸುವ ತನಕ ಕನಿಷ್ಠ ಒಂದು ವರ್ಷ ಗಣಿಗಾರಿಕೆ ಸ್ಥಗಿತಗೊಳಿಸಬೇಕು ಎಂದು ಹರಿಹರ ಶಾಸಕ ಬಿ.ಪಿ. ಹರೀಶ್ ಆಗ್ರಹಿಸಿದ್ದಾರೆ.
ಕೋಟ್ಯಂತರ ರೂ. ಮೌಲ್ಯದ ಅರಣ್ಯ ಸಂಪತ್ತು ರಕ್ಷಣೆಗೆ ಕೇಂದ್ರ ಸರಕಾರ ತ್ವರಿತ ಕ್ರಮಕೈಗೊಳ್ಳಬೇಕು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕರ್ನಾಟಕ ಸೇರಿದಂತೆ ಭಾರತದ ಹತ್ತು ರಾಜ್ಯಗಳಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಬಹುತೇಕ ಎಲ್ಲ ರಾಜ್ಯಗಳಲ್ಲಿಯೂ ಅರಣ್ಯ ಸಂಪತ್ತು ಲೂಟಿಯಾಗುತ್ತಿದೆ. ಪರಿಸರಕ್ಕೆ ಹಾನಿ ಮಾಡುವ ಗಣಿಗಾರಿಕೆ ಅಗತ್ಯವಿಲ್ಲ. ಗಣಿಗಾರಿಕೆಯಲ್ಲಿ ತೊಡಗಿರುವವರು ಒಂದು ಪಕ್ಷಕ್ಕೆ ಮಾತ್ರ ಸೀಮಿತವಾಗಿಲ್ಲ. ರಾಷ್ಟ್ರದ ಸಂಪತ್ತಿಗೆ ಧಕ್ಕೆ ಮಾಡುವವರು ಯಾರೇ ಆಗಿದ್ದರೂ ಕಠಿಣ ಶಿಕ್ಷೆ ವಿಧಿಸಬೇಕು. ಇಂಥವರ ಎಲ್ಲ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಒತ್ತಾಯಿಸಿದರು.
ದೇಶದಲ್ಲಿ ನಿರ್ದಿಷ್ಟ ರೂಪುರೇಷೆ ಇಲ್ಲದೆ ನಡೆಯುತ್ತಿರುವ ಗಣಿಗಾರಿಕೆಗೆ ಸ್ಪಷ್ಟ ಮಾರ್ಗ ಸೂಚಿಯನ್ನು ಕೇಂದ್ರ ಸರಕಾರ ರೂಪಿಸಬೇಕು. ದೇಶದ ಬಹುತೇಕ ಕಡೆ ಅರಣ್ಯ ಪ್ರದೇಶದಲ್ಲೇ ಗಣಿಗಾರಿಕೆ ನಡೆಸಲಾಗುತ್ತಿದ್ದು, ಅರಣ್ಯ ಸಂಪತ್ತು ನಾಶವಾಗುತ್ತಿದೆ. ರಾಜ್ಯದಿಂದ ಅದಿರು ರಫ್ತು ನಿಷೇಧಿಸಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಧಾನಿಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ಕೇಂದ್ರ ಶೀಘ್ರ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.